- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮದುವೆಗೆ ಬಂದಿದ್ದ ಯುವಕ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವು

Praveen [1]ಬಂಟ್ವಾಳ : ಸಜಿಪ ಮುನ್ನೂರು ಗ್ರಾಮದ ಮಂಜಲ್ಪಾದೆ ಎಂಬಲ್ಲಿ ಸ್ನೇಹಿತನ ಮದುವೆಗೆಂದು ಬಂದಿದ್ದ ಯುವಕನೋರ್ವ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋದ ಘಟನೆ ರವಿವಾರ ಬೆಳಗ್ಗೆ ನಡೆದಿದೆ.

ರವಿವಾರ ಕಟೀಲಿನಲ್ಲಿ  ತನ್ನ ಸ್ನೆಹಿತ ಹರೀಶ್ ಎಂಬವರ ಮದುವೆಗೆ ಬಂದಿದ್ದ ಕಡೇಶ್ವಾಲ್ಯ ಗ್ರಾಮದ ಪ್ರವೀಣ್ ಕುಲಾಲ್(20) ನೀರುಪಾಲಾದ ದುರ್ದೈವಿ.  ಈತನೊಂದಿಗೆ ನದಿಗೆ ಸ್ನಾನಕ್ಕೆ ಇಳಿದಿದ್ದ ಕಿರಣ್ ಅಮ್ಟೂರು, ಅಜಯ್ ಹೊನ್ನಾವರ ಹಾಗೂ ಕಮಲಾಕ್ಷ ಶಾಂತಿಗುಡ್ಡೆ ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ನೇಹಿತ ಹರೀಶ್‌ರ ಮದುವೆಗಾಗಿ ಪ್ರವೀಣ್ ಶನಿವಾರ ಸಂಜೆಯೇ ಮಂಜಲ್ಪಾದೆಯ ಮನೆಗೆ ಬಂದಿದ್ದರು. ರವಿವಾರ ಬೆಳಗ್ಗೆ ಮದುವೆಯ ದಿಬ್ಬಣ ಕಟೀಲಿನತ್ತ ಹೊರಟ ಬಳಿಕ ಪ್ರವೀಣ್, ಹರೀಶ್ ಮದುವೆಗೆಂದು ಬಂದಿದ್ದ ಕಿರಣ್, ಅಜಯ್, ವಿಜಯ್, ಕಮಲಾಕ್ಷ ಜೊತೆಯಾಗಿ ನೇತ್ರಾವತಿ ನದಿಗೆ ಸ್ನಾನಕ್ಕೆ ಇಳಿದಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಕ್ಕ ಪ್ರವೀಣ್ ಕೊಚ್ಚಿ ಹೋಗಿದ್ದು, ಆತನ ರಕ್ಷಣೆಗೆ ಕಮಲಾಕ್ಷ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ನೀರಿನ ಅಬ್ಬರಕ್ಕೆ ಅಸ್ವಸ್ಥಗೊಂಡಿದ್ದ ಕಮಲಾಕ್ಷನನ್ನು ಸ್ನೇಹಿತರಾದ ವಿಜಯ್, ಅಜಯ್ ಹಾಗೂ ಕಿರಣ್ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರು. ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋದ ಪ್ರವೀಣ್ ಗಾಗಿ ಸ್ಥಳೀಯರು, ಅಗ್ನಿಶಾಮಕದಳ ವ್ಯಾಪಕ ಕಾರ್ಯಾಚರಣೆ ನಡೆಸಿದರೂ ಪ್ರವೀಣ್ ಪತ್ತೆಯಾಗಿರಲಿಲ್ಲ.

ಮಡಿಕೇರಿಯಲ್ಲಿ ಪ್ರವೀಣ್ ಹರೀಶ್ ಜೊತೆಯಲ್ಲಿ ವೆಲ್ಡಿಂಗ್ ಕೆಲಸ  ಮಾಡುತ್ತಿದ್ದರು. ಪ್ರವೀಣ್ ತನ್ನ ಸಂಬಂಧಿ ವಿಜಯ್ ಜೊತೆಯಲ್ಲಿ ಹರೀಶ್ ಮನೆಗೆ ಬಂದಿದ್ದ ರು. ಚಂದ್ರಹಾಸ ಕುಲಾಲ್ ಹಾಗೂ ಬೇಬಿ ದಂಪತಿಗಳ ಇಬ್ಬರು ಪುತ್ರರ ಪೈಕಿ ಪ್ರವೀಣ್ ಹಿರಿಯವ.  ಪ್ರವೀಣ್ ಪ್ರಶಕ್ತ ಮಂಗಳೂರಿನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು.

ಘಟನಾ ಸ್ಥಳಕ್ಕೆ 9.30ರ ಸುಮಾರಿಗೆ ಆಗಮಿಸಿದ್ದ ಅಗ್ನಿ ಶಾಮಕದಳದ ಸಿಬ್ಬಂದಿ ನೀರುಪಾಲಾದ ಪ್ರವೀಣ್ ನನ್ನು ಹುಡುಕಾಟದ ಕಾರ್ಯಾಚರಣೆ ನಡೆಸಿದರಾದರೂ, ನಮ್ಮ ಬೋಟ್‌ನಲ್ಲಿ ಶೋಧ ಕಾರ್ಯ ಅಸಾಧ್ಯ ಎಂದು 12 ಗಂಟೆಯ ಸುಮಾರಿಗೆ ವಾಪಾಸು ತೆರಳಿದರು.  ಬೆಳಗ್ಗೆ 8ರ ಸುಮಾರಿಗೆ ಘಟನೆ ನಡೆದಿದ್ದರೂ ಪೊಲೀಸರು ಘಟನಾ ಸ್ಥಳಕ್ಕೆ ತಲುಪುವಾಗ ಮಧ್ಯಾಹ್ನ 1ಗಂಟೆಯಾಗಿತ್ತು.

ಸ್ಥಳಿಯರು ಪೊಲೀಸ್ ಹಾಗೂ ಅಗ್ನಿ ಶಾಮಕ ದಳದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅಗ್ನಿಶಾಮಕ ದಳದವರು ತೆರಳಿದ ಬಳಿಕ ಸ್ಥಳೀಯರು ಸಂಜೆಯ ತನಕ ಪ್ರವೀಣ್ ಗಾಗಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ.