- KANNADA MEGA MEDIA NEWS :: News Coverage From Mangalore and Major Cities of India and world wide - http://kannada.megamedianews.com -

ಕಾರ್ಕಳದಲ್ಲಿ 1 ಕೋಟಿಗೂ ಹೆಚ್ಚು ಮೌಲ್ಯದ ಬೃಹತ್ ಪ್ರಮಾಣದ ಅಕ್ರಮ ಸ್ಫೋಟಕ ಪತ್ತೆ

Explosive [1]

ಕಾರ್ಕಳ : ಒಟ್ಟು ರೂ. 1 ಕೋಟಿಗೂ ಹೆಚ್ಚು ಮೌಲ್ಯದ ಬೃಹತ್ ಪ್ರಮಾಣದ ಅಕ್ರಮ ಸ್ಫೋಟಕ ಕಾರ್ಕಳ ತಾಲ್ಲೂಕಿನ ಮೂರು ಕಡೆ ಮಂಗಳವಾರ ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಖಚಿತ ಮಾಹಿತಿ ಮೇರೆಗೆ ಎಎಸ್‍ಪಿ ಅಣ್ಣಾಮಲೈ ನೇತೃತ್ವದ ಪೊಲೀಸ್ ಸಿಬ್ಬಂದಿ ಏಕಕಾಲಕ್ಕೆ ತಾಲ್ಲೂಕಿನ ನಕ್ರೆ ಗ್ರಾಮದ ವರ್ಣಬೆಟ್ಟು, ಪಟ್ಟಣದ ಸಮೀಪವಿರುವ ಕೋಟಿ ಚೆನ್ನಯ ಥೀಂ ಪಾರ್ಕ್ ಸಮೀಪದ ಗಂಧದ ಬಟ್ಟಿ ಎಂಬಲ್ಲಿನ ತೋಟದಲ್ಲಿ ಹಾಗೂ ತೆಳ್ಳಾರು ಸಮೀಪದ ದುರ್ಗಾ ಗ್ರಾಮದಲ್ಲಿ ನಡೆಸಿದ ದಾಳಿಯಲ್ಲಿ ಇವು ದೊರೆತಿವೆ.

ವಶಪಡಿಸಿಕೊಂಡ ಸ್ಫೋಟಕಗಳಲ್ಲಿ 60ರಿಂದ 70 ಟನ್‌ಗಳಷ್ಟು ಅಮೋನಿಯಂ ನೈಟ್ರೇಟ್, 43 ಸಾವಿರ ಮೌಲ್ಯದ ಡೆಟೋನಿಟರ್, ಎಲೆಕ್ಟ್ರೋಲೈಟ್, ಫ್ಯೂಸ್ ಹಾಗೂ 19 ಸಾವಿರ ಮೀಟರ್‌ನಷ್ಟು ಸೇಫ್ಟಿ ವಯರ್ ಸೇರಿವೆ.

ಈ ವಸ್ತುಗಳನ್ನು ಸಂಶಯ ಬರದ ರೀತಿ ರಟ್ಟಿನ ಪೆಟ್ಟಿಗೆಗಳಲ್ಲಿ ಅಡಗಿಸಿಡಲಾಗಿತ್ತು. ಪೊಲೀಸರು ದಾಳಿ ನಡೆಸಿದ ಮೂರು ಸ್ಥಳಗಳು ಬಿಜು ಎಂಬ ವ್ಯಕ್ತಿಗೆ ಸೇರಿದ್ದು ಎನ್ನಲಾಗಿದೆ. ಬಿಜು ಎನ್ನುವವರಿಗೆ ತಾಲ್ಲೂಕಿನ ಅಜೆಕಾರು ಎಂಬಲ್ಲಿ ಸ್ಫೋಟಕಗಳನ್ನು ದಾಸ್ತಾನು ಇಡಲು ಪರವಾನಗಿ ಇದೆ.

ಆದರೆ ಇದೀಗ ಪೊಲೀಸರು ದಾಳಿ ನಡೆಸಿದ ಸ್ಥಳಗಳಲ್ಲಿ ಸ್ಫೋಟಕಗಳನ್ನು ಇಡಲು ಪರವಾನಗಿ ಇಲ್ಲ. ಪರವಾನಗಿ ಇಲ್ಲದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸ್ಫೋಟಕಗಳನ್ನು ಶೇಖರಿಸಿಟ್ಟಿರುವುದು ಸಂಶಯಕ್ಕೆ ಎಡೆಮಾಡಿದೆ. ಈ ಪೈಕಿ ತಾಲ್ಲೂಕಿನ ನಕ್ರೆ ಗ್ರಾಮದ ವರ್ಣ ಬೆಟ್ಟು ಎಂಬಲ್ಲಿ ಅತಿ ಹೆಚ್ಚು ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿವೆ.

ರಾಜ್ಯದಲ್ಲಿ ಮೊದಲ ಬಾರಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ರಮ ಸ್ಫೋಟಕಗಳು ವಶವಾಗಿವೆ. ಸ್ಥಳಕ್ಕೆ ಜಿಲ್ಲಾ ಎಸ್‍ಪಿ ಬೋರಲಿಂಗಯ್ಯ, ಹೆಚ್ಚುವರಿ ಎಸ್‍ಪಿ ಸಂತೋಷ್ ಕುಮಾರ್ ಧಾವಿಸಿ ತನಿಖೆ ಮುಂದುವರಿಸಿದ್ದು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆದಿದೆ.