ಉಳ್ಳಾಲ ಕಡಲ್ಕೊರೆತದ ಸಮಸ್ಯೆಗೆ ಅಕ್ಟೋಬರ್‌ ತಿಂಗಳಲ್ಲಿ ಪೈಲೆಟ್‌ ಕಾಮಗಾರಿ ಆರಂಭ

1:21 PM, Wednesday, June 11th, 2014
Share
1 Star2 Stars3 Stars4 Stars5 Stars
(5 rating, 5 votes)
Loading...
Ullal-sea erection

ಉಳ್ಳಾಲ : ಉಳ್ಳಾಲ ಕಡಲ್ಕೊರೆತದ ಗಂಭೀರ ಸಮಸ್ಯೆಯನ್ನು ಬಗೆ ಹರಿಸಲು ಪೈಲೆಟ್‌ ಕಾಮಗಾರಿ ನಡೆಯುತ್ತಿದೆ. ಪೂರ್ಣ ಪ್ರಮಾಣದ ಕಾಮಗಾರಿ ಮುಂದಿನ ಅಕ್ಟೋಬರ್‌ ತಿಂಗಳಲ್ಲಿ ಪ್ರಾರಂಭವಾಗಲಿದ್ದು, ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

ಮಂಗಳವಾರ ಉಳ್ಳಾಲ ಕಡಲ್ಕೊರೆತದ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಎಡಿಬಿ ಯೋಜನೆಯಡಿ 223 ಕೋಟಿ ರೂ. ಉಳ್ಳಾಲಕ್ಕೆ, ಉಚ್ಚಿಲ, ಸೋಮೇಶ್ವರ, ತಲಪಾಡಿಗೆ 26 ಕೋಟಿ ಬಿಡುಗಡೆಯಾಗಿದ್ದು, ಮೊಗವೀರಪಟ್ಣದಲ್ಲಿ ತಾತ್ಕಾಲಿಕ ಬಮ್ಸ್‌ ರಚನೆ ಕಾಮಗಾರಿ ಪ್ರಾರಂಭಗೊಂಡಿದೆ. ಮುಂದಿನ ಮೂರು ತಿಂಗಳು ಕಡಲಿನ ಅಬ್ಬರಕ್ಕೆ ತಡೆಯೊಡ್ಡುವುದು ಅಸಾಧ್ಯ. ಈ ಸಂದರ್ಭ ತಾತ್ಕಾಲಿಕ ತಡೆ ಮೂಲಕ ಸಮುದ್ರ ಪಾಲಾಗುವ ಮನೆಗಳನ್ನು ರಕ್ಷಿಸುವ ಕಾರ್ಯ ಸರಕಾರದ ವತಿಯಿಂದ ಆಗಬೇಕು. ತಾತ್ಕಾಲಿಕ ತಡೆಗೋಡೆ ನಿರ್ಮಿಸುವ ಮೂಲಕ ಸಮುದ್ರ ಪಾಲಾಗುತ್ತಿರುವ ಮನೆಗಳನ್ನು ರಕ್ಷಿಸುವ ಕಾರ್ಯ ಜಿಲ್ಲಾಡಳಿತ ಕೂಡಲೇ ಮಾಡಬೇಕಿದೆ ಎಂದರು.

ಉಳ್ಳಾಲ ಪುರಸಭಾ ವ್ಯಾಪ್ತಿಯ ಒಂಭತ್ತುಕೆರೆ ಬಳಿ ರಾಜೀವ ಗಾಂಧಿ ವಸತಿ ಯೋಜನೆಯಡಿ ನಿರ್ಮಾಣಗೊಂಡಿರುವ 390 ಮನೆಗಳನ್ನು ಬಡವರ ಕಾಲನಿಯಾಗಿ ಪರಿವರ್ತಿಸಿ ವಸತಿ ಹೀನರಿಗೆ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಒಂಭತ್ತುಕೆರೆಗೆ ಭೇಟಿ ನೀಡಿ ವೀಕ್ಷಿಸಿದ ಸಚಿವರು, ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಮೂರು ತಿಂಗಳೊಳಗೆ ಯೋಜನೆ ರೂಪಿಸಲು ಆದೇಶ ನೀಡಿದರು. ಮನೆ ವಾಸ ಯೋಗ್ಯವಾಗುವಂತೆ ಮಾಡುವುದು ಅಥವಾ ಇರುವ ಮನೆಗಳನ್ನು ತೆಗೆದು ಬಹುಮಹಡಿ ಕಟ್ಟಡ ನಿರ್ಮಿಸಿ ವಸತಿ ಇಲ್ಲದವರಿಗೆ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷ ಸತೀಶ್‌ ಕುಂಪಲ, ಚಂದ್ರಶೇಖರ್‌ ಉಚ್ಚಿಲ್‌, ಪುರಸಭಾ ಸದಸ್ಯೆ ಮೀನಾಕ್ಷಿ ದಾಮೋದರ್‌, ಸೋಮೇಶ್ವರ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ರಾಜೇಶ್‌ ಉಚ್ಚಿಲ್‌, ಆಹಮ್ಮದ್‌ ಬಾವ ಕೊಟ್ಟಾರ ಮೊದಲಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English