ದುಡ್ಡಿಗೆ ಮರುಳಾಗಿ ಮಾಧ್ಯಮಗಳು ಸುದ್ದಿ ಮಾಡುವ ಅಪಾಯಕಾರಿ ದಿನಗಳ ಬಂದಿವೆ : ಉಮಾಪತಿ

10:04 PM, Saturday, December 19th, 2015
Share
1 Star2 Stars3 Stars4 Stars5 Stars
(5 rating, 5 votes)
Loading...

Media

ಮಂಗಳೂರು : ನಮ್ಮ ನಿತ್ಯದ ಬದುಕು ಮಾರುಕಟ್ಟೆ ಶಕ್ತಿಗಳಿಂದ ಪ್ರಭಾವಿತಗೊಳ್ಳುತ್ತಿದೆ. ದಿನೇದಿನೇ ಇದರ ಸುಳಿಯೊಳಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದೇವೆ. ಸಮೂಹ ಮಾಧ್ಯಮಗಳು ಕೂಡ ಈ ಮಾತಿಗೆ ಹೊರತಾಗಿಲ್ಲ. ಮಾಧ್ಯಮಗಳ ಇಂದಿನ ಶೈಲಿಗೆ ಮಾರುಕಟ್ಟೆ ವಿಧಿಸಿರುವ ಹಲವು ಇತಿಮಿತಿಗಳಿವೆ ಎಂದು ಹಿರಿಯ ಪತ್ರಕರ್ತ ಡಿ. ಉಮಾಪತಿ ಹೇಳಿದರು.

ಇಲ್ಲಿನ ನಂತೂರು ಬಳಿ ಇರುವ ಶಾಂತಿ ಕಿರಣ ಸಭಾಂಗಣದಲ್ಲಿ ಅಭಿಮತ ಸಂಸ್ಥೆಯು ಆಯೋಜಿಸಿರುವ ಮೂರನೇ ವರ್ಷದ ಜನನುಡಿ ಸಮಾವೇಶದ ನುಡಿ ಮಾರ್ಗ ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಿದ ಅವರು, ಇತ್ತೀಚೆಗೆ ಪ್ರಜ್ಞಾಪೂರ್ವಕವಾಗಿ ಮಾರುಕಟ್ಟೆಯ ಮಿತಿಗಳನ್ನು ಹೇರಲಾಗುತ್ತಿದೆ. ಸಂಪಾದಕೀಯ ಸಿಬ್ಬಂದಿ ಮೊದಲೇ ಶರಣಾಗಿ “ಪೆನ್” ಡ್ರಾಪ್ ಸೈಲೆನ್ಸ್ ವಹಿಸುವಂತೆ ಮಾಡಲಾಗುತ್ತಿದೆ. ಬಲಿಷ್ಠರ ಮಾರುಕಟ್ಟೆಗೆ ಮರುಳಾಗಿ ಅವರ ಪರವಾಗಿ ಸುದ್ದಿ ಮಾಡುವ ಅಪಾಯಕಾರಿ ದಿನಗಳು ಇವು ಎಂದು ಆತಂಕ ವ್ಯಕ್ತಪಡಿಸಿದರು.

ನಮ್ಮ ಸಿನಿಮಾ, ಪುಸ್ತಕ, ಪತ್ರಿಕೆ ಎಲ್ಲದರ ಮೇಲೆ ದಾಳಿ ನಡೆದಿದೆ. ಅಕ್ಷರ ಸಂಸ್ಕೃತಿಯನ್ನು ದ್ವೇಷಿಸುವ ಶಕ್ತಿಗಳು ತೋಳೇರಿಸಿ ನಿಂತಿವೆ. ವೈಯಕ್ತಿಕ ಚಾರಿತ್ರ್ಯ ಹನನದ ಮಟ್ಟಕ್ಕೂ ಇಳಿದಿದ್ದಾರೆ ಎಂದರು.

ನಾವು ಯಾರ ಜತೆಗಿರಬೇಕು? ಶೋಷಿತನ ಜೊತೆಯೋ ಅಥವಾ ಶೋಷಕರ ಜೊತೆಯೋ ಎಂದು ನಿರ್ಧಾರ ಕೈಗೊಳ್ಳುವುದು ಬಹುಮುಖ್ಯ ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರ ವಿರೋಧಿ ಎಂದು ಆಪಾದಿಸುವಾಗ ರಾಷ್ಟ್ರ ಎಂದರೇನು? ಅಂಚಿನಲ್ಲಿರುವ ಜನರು ಈ ವ್ಯಾಖ್ಯಾನದಲ್ಲಿ ಬರುವುದಿಲ್ಲವೇ ಎಂಬ ಪ್ರಶ್ನೆ ಬರುತ್ತದೆ. ದೇಶ ಎಂದರೆ ಬರೀ ಮಣ್ಣಲ್ಲ, ಉಸಿರಾಡುವ, ಜೀವಿಸುವ ಮನುಷ್ಯರು ಎಂದು ತೆಲುಗು ಕವಿ ಗುರುಜಾಡ ಅಪ್ಪಾರಾವ್ ಹೇಳಿದ್ದರು ಎಂದು ಉಲ್ಲೇಖಿಸಿದರು.

ಆರಡಿ ಮೂರಡಿ ಜಾಗವಿದ್ದಾಗ ಬಹಳಷ್ಟು ಪತ್ರಕರ್ತರು ನಮಗೆ ನಾಲ್ಕಡಿ ಎರಡಡಿ ಸಾಕು ಎಂಬ ಪ್ರವೃತ್ತಿ ತೋರುತ್ತಿದ್ದಾರೆ. ಇದರ ಬದಲಾಗಿ ಆರಡಿಯನ್ನು ಹತ್ತಡಿ ಮಾಡಿಕೊಳ್ಳುವ ದಾಷ್ಟ್ಯ, ಧೈರ್ಯ ಕಡಿಮೆಯಾಗುತ್ತಿದೆ ಎಂದ ಅವರು, ಕೇಂದ್ರದಲ್ಲಿ ಹೊಸ ಸರ್ಕಾರ ಬಂದ ಮೇಲೆ ಗೃಹ ಇಲಾಖೆ ಕವರ್ ಮಾಡುವ ಪತ್ರಕರ್ತರು ಸೌತ್ ಬ್ಲಾಕ್ಗೆ ಹೋಗಿ ಸರ್ಕಾರದ ಅಧಿಕಾರಿಗಳು ಪ್ರತಿನಿಧಿಗಳೊಂದಿಗೆ ಮಾತನಾಡುವುದನ್ನು ನಿಷೇಧಿಸಲಾಗಿದೆ. ಪತ್ರಕರ್ತರು ಪ್ರಧಾನಿ ಜೊತೆ ವಿದೇಶ ಪ್ರಯಾಣಕ್ಕೂ ನಿರ್ಬಂಧವಿದೆ. ಹೊಸ ಪ್ರಧಾನಿ ಮೊದಲು ಪ್ರಯಾಣಿಸಿದ್ದು ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಸಮ್ಮೇಳನಕ್ಕೆ. ಆಗ ಅಂತಿಮಗೊಳಿಸಲಾಗಿದ್ದ ಪತ್ರಕರ್ತರ ಪಟ್ಟಿಯನ್ನು ಕುರಿತು ಮಾಜಿ ಐ.ಎಸ್.ಎಸ್. ಅಧಿಕಾರಿಯೊಬ್ಬರು ಈ ಕಸವನ್ನೆಲ್ಲಾ ಕಟ್ಟಿಕೊಂಡು ವಿದೇಶಕ್ಕೆ ಹೋಗ್ತಾರಾ ಎಂದು ಹೇಳಿ ಆ ಪಟ್ಟಿಯನ್ನು ಹರಿದು ಹಾಕಿದ್ದರು ಎಂಬುದನ್ನು ನೆನಪಿಸಿಕೊಂಡರು.

ಪತ್ರಕರ್ತ ಎಸ್.ಸಿ. ದಿನೇಶ್ ಕುಮಾರ್ ಅವರು ವಿಷಯ ಮಂಡಿಸುತ್ತಾ, ಇಂದು ಎಲ್ಲರೂ ಟಾರ್ಗೆಟ್ಗಳಾಗುತ್ತಿದ್ದೇವೆ. ವೈಯಕ್ತಿಕ ಚಾರಿತ್ರ್ಯ ಹನನದ ಕೆಲಸಗಳಾಗುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೇಸಿಗೆ ಪಡುವ ರೀತಿಯಲ್ಲಿ ಬಳಸಿಕೊಳ್ಳುವ ಕೆಲಸವೂ ಆಗುತ್ತದೆ. ನಾವು ಒಳ್ಳೆಯದನ್ನೇನೂ ಮಾತಾಡುವ ಹಾಗೇ ಇಲ್ಲ ಎಂದರು.

ನಾವು “ಅವರ” ರೀತಿ ಕೀಳುಮಟ್ಟಕ್ಕೆ ಇಳಿಯಲಾಗುವುದಿಲ್ಲ. ಸೋಷಿಯಲ್ ಮೀಡಿಯಾ ಇಂದು ಭಯೋತ್ಪಾದಕರನ್ನು ಸೃಷ್ಟಿ ಮಾಡುವ ಕೇಂದ್ರವಾಗಿದೆ. ಅಕ್ಷರ ಗೊತ್ತಿರುವಂತ ಜನರು ಅರೆಬೆಂದ ಹುಡುಗರಿಂದ ತಮ್ಮ ಕೈಯಲ್ಲಿ ಆಗದ್ದನ್ನು ಮಾಡಿಸುತ್ತಿದ್ದಾರೆ. ಅಂತಹ ಯುವಕರ ತಲೆಯಲ್ಲಿ ವಿಷ ತುಂಬಿಸುತ್ತಿದ್ದಾರೆ ಎಂದರು.

ಪ್ರೊ. ಬಾಲಗಂಗಾಧರ್ ಅವರು ಅಂಬೇಡ್ಕರ್ ಅವರನ್ನು ನಿಂದಿಸಿದ್ದನ್ನು ಪ್ರಸ್ತಾಪಿಸಿದ ಅವರು, ಒಬ್ಬ ಸಂಘಪರಿವಾರದವನೂ ಹೇಳಲು ಭಯಪಡುವುದ್ನು ಗೆಂಟ್ ಯೂನಿವರ್ಸಿಟಿಯ ಪ್ರೊಫೆಸರ್ ಮಾತಾಡುತ್ತಾರೆ. ಇಂದು ನಮ್ಮ ಅಸ್ತ್ರಗಳು ತುಕ್ಕಾಗಿದೆ. ಹಳತಾಗಿದೆ. ನಮ್ಮ ಪ್ರತಿರೋಧದ ಮಾದರಿಗಳು ಹಳೆಯದಾಗಿವೆ. ಹೊಸದೇನನ್ನಾದರೂ ಅನ್ವೇಷಣೆ ಮಾಡಬೇಕಿದೆ ಅನ್ನಿಸುತ್ತಿದೆ. ಪ್ರಗತಿಪರರನ್ನು ಹಣಿಯಲು ಮೀಡಿಯಾವನ್ನು ಒಂದು ಸಾಧನವಾಗಿ ಬಳಸಿಕೊಳ್ಳಲಾಗುತ್ತದೆ ಎಂದರು.

ಯಾರೋ ಅಜೆಂಡಾಗಳನ್ನು ಸೆಟ್ ಮಾಡುವುದಕ್ಕೆ ನಾವು ಪ್ರತಿಕ್ರಿಯಿಸುವುದೇ ಆದರೆ ನಮ್ಮ ಅಜೆಂಡಾಗಳನ್ನು ಸೆಟ್ ಮಾಡುವುದು ಯಾವಾಗ? ಈ ಕುರಿತು ಯೋಚಿಸಬೇಕಿದೆ. ಇದಕ್ಕೆ ಉತ್ತರವಾಗಿ ಮೂಲಭೂತವಾದಿಗಳನ್ನು, ಹಿಂದುತ್ವವಾದಿಗಳನ್ನು ಒಂದೇ ದನಿಯಲ್ಲಿ ವಿರೋಧಿಸಬೇಕಿದೆ ಎಂದರು.

ಲೇಖಕ ಸಂವರ್ತ ಸಾಹಿಲ್ ಅವರು ವಿಷಯ ಮಂಡಿಸಿ, ಸಬಾಲ್ಟರ್ನ್ ಜನತೆ ಮುಖ್ಯವಾಹಿನಿಯ ಭಾಷೆಯನ್ನೇ ಮಾತಾಡಬೇಕಾ? ಅವರು ನಿರೂಪಿಸುವ ಮಾರ್ಗದಲ್ಲಿಯೇ ಮಾತಾಡಬೇಕಾ? ಯಾಕೆ ಮುಖ್ಯವಾಹಿನಿ ಮುಂಡಾ, ದಲಿತರ ಭಾಷೆ ಕಲಿಯಬಾರದು ಎಂದು ಪ್ರಶ್ನಿಸಿದ ಅವರು, ಇಲ್ಲಿ ಮೌನದ ಇತಿಹಾಸ ದಾಖಲಾಗಬೇಕು. ಅಭಿವ್ಯಕ್ತಿ ಬಗ್ಗೆ ಮಾತನಾಡುವಾಗ ಯಾರ ಅಭಿವ್ಯಕ್ತಿ ಎಂಬುದು ಮುಖ್ಯ. ಯಾರ ಅಭಿವ್ಯಕ್ತಿ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಪ್ರಶ್ನಿಸಿಕೊಳ್ಳದೇ ಹೋದರೆ ಪ್ರಯೋಜನವಿಲ್ಲ ಎಂದರು.

ನುಡಿಗೆ ಒಂದು ಶಕ್ತಿ ಇದೆ. ನುಡಿಯ ಮುಖಾಂತರ ಹೊಸ ಲೋಕವನ್ನು ಸೃಷ್ಟಿಸಲು ಸಾದ್ಯವಿದೆ ಎಂದರು.

ನಂತರ ನಡೆದ ಸಂವಾದದಲ್ಲಿ ಕಿರಣ್ ಗಾಜನೂರು, ಲಿಂಗರಾಜ್, ಚೇತನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಅಧ್ಯಕ್ಷತೆ ವಹಿಸಿದ್ದ ದೆಹಲಿ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ಅವರು, ಯಾರು ಭಾರತೀಯ ಸಂಸ್ಕೃತಿಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೋ ಅವರು ಈ ದೇಶದ ಸಂಸ್ಕೃತಿಯ ಮಹಾದ್ರೋಹಿಗಳು. ಅವರಿಗೆ ಇಲ್ಲಿನ ಸಂಸ್ಕೃತಿ ಗೊತ್ತಿಲ್ಲ ಎಂದರು.

ಎಸ್ಎಸ್ಎಲ್ಸಿ, ಪಿಯುಸಿ ಮುಗಿಸಿ ಎಂಜಿನಯರಿಂಗ್ ಮೆಡಿಕಲ್ ಹೋಗುವ ಲಕ್ಷಾಂತರ ಹುಡುಗರಿಗೆ ಈ ದೇಶದ ಚರಿತ್ರೆ ಗೊತ್ತಿಲ್ಲ ಎಂದ ಅವರು, ನಾವು ಮೊದಲು ಯಾವ ಜನಗಳ ಬಗ್ಗೆ ಮಾತನಾಡುತ್ತೇವೋ ಯಾರ ಬಗ್ಗೆ ಕಾಳಜಿ ವಹಿಸುತ್ತೇವೋ ಅವರ ಪರಿಭಾಷೆಯನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ. ಜನಗಳ ಮಧ್ಯೆ ಹೋಗಿ ಜನಗಳಿಂದ ಕಲಿಯುವ ಅಗತ್ಯ ನಮಗಿದೆ. ನಮ್ಮಲ್ಲಿ ಪಠ್ಯಗಳು ಭಿನ್ನ ರೂಪದಲ್ಲಿ ಹೊಸ ರೂಪ ಪಡೆದಿವೆ. ಇದನ್ನು ಹೋರಾಟಗಾರರು ಅರ್ಥಮಾಡಿಕೊಳ್ಳಬೇಕಿದೆ ಎಂದರು.

ಯಾವ ಚಳವಳಿಯೂ ಒಂದು ಹಾದಿಯನ್ನು ಪೂರ್ಣ ನಿಗದಿಪಡಿಸಿಕೊಂಡು ಮುಂದೆ ಹೋಗುವುದಿಲ್ಲ. ನಾವು ನಮ್ಮ ಚರಿತ್ರೆಯನ್ನು ಮತ್ತು ಹೋರಾಟದ ಪರಿಭಾಷೆಗಳನ್ನು ಕಟ್ಟುವಾಗ ಯಾರ ಭಾಷೆಯನ್ನು ಬಳಸುತ್ತಿದ್ದೇವೆ ಎಂದು ಅವರು ಪ್ರಶ್ನಿಸಿದ ಅವರು, ಶ್ರೀಲಂಕಾದ 80,000 ಮುಸಲ್ಮಾನರು ಅಮೆರಿಕಕ್ಕೆ ಮಾಹಿತಿ ನೀಡುತ್ತಾರೆ ಎಂಬ ಮಾಹಿತಿಯನ್ನು ಮಾಧ್ಯಮಗಳು ಸೃಷ್ಟಿಸಿದವು. ಮೂರು ತಿಂಗಳಲ್ಲಿ ಎಲ್ಟಿಟಿಇ ಮುಸ್ಲಿಮರನ್ನು ದಕ್ಷಿಣಕ್ಕೆ ಅಟ್ಟಿತು. ನಂತರ ಮೂರು ತಿಂಗಳಲ್ಲಿ ಎಲ್ಟಿಟಿಇ ನಾಶವಾಯಿತು. ಇಂದು ಅಲ್ಲಿ ಮಿಲಿಟೆಂಟ್ ಬುದ್ದಿಸ್ಟ್ ಗ್ರೂಪ್ ಆದ ಬಿ.ಬಿ.ಎಸ್. ಹುಟ್ಟಿಕೊಂಡಿದೆ. ಪ್ರತಿನಿತ್ಯ ಮುಸ್ಲಿಮರನ್ನು ಕೊಲ್ಲುತ್ತಿದೆ. ಯಾವ ಮಾದ್ಯಮಗಳೂ ಈ ಕುರಿತು ಮಾತನಾಡುತ್ತಿಲ್ಲ ಎಂದರು.

ಗೋಷ್ಠಿಯನ್ನು ಜೀವನ್ ರಾಜ್ ನಿರ್ವಹಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English