ಮಹದಾಯಿ ಮಧ್ಯಂತರ ತೀರ್ಪಿನ ಹಿನ್ನೆಲೆಯಲ್ಲಿ ಮಹತ್ವದ ಸರ್ವಪಕ್ಷ ಸಭೆ ಆಗಸ್ಟ್‌ 7ರಂದು ನಿಗದಿ

1:38 PM, Thursday, August 4th, 2016
Share
1 Star2 Stars3 Stars4 Stars5 Stars
(No Ratings Yet)
Loading...

Mahadayiಬೆಂಗಳೂರು: ಮಹದಾಯಿ ಮಧ್ಯಂತರ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯದ ಮುಂದಿನ ನಡೆಗಳನ್ನು ನಿರ್ಧರಿಸಲು ಮಹತ್ವದ ಸರ್ವಪಕ್ಷ ಸಭೆ ಆಗಸ್ಟ್‌ 7ರಂದು ನಿಗದಿಯಾಗಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ಕಾನೂನು ತಜ್ಞರ ಜತೆ ಚರ್ಚಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯ ತಿಳಿಸಿದರು.

ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರು, ರಾಜ್ಯದ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು, ಉತ್ತರ ಕರ್ನಾಟಕ ಭಾಗದ ಶಾಸಕರು, ವಿಧಾನ ಪರಿಷತ್‌ ಸದಸ್ಯರನ್ನು ಸಭೆಗೆ ಆಹ್ವಾನಿಸಲಾಗುವುದು. ಸರ್ವಪಕ್ಷ ಸಭೆಯಲ್ಲಿ ನ್ಯಾಯಾಧಿಕರಣದ ಮುಂದೆ ಪುನರ್‌ ಪರಿಶೀಲನೆ ಅರ್ಜಿ ಸಲ್ಲಿಸಬೇಕೋ ಅಥವಾ ಸುಪ್ರಿಂಕೋರ್ಟ್‌ ಮೊರೆ ಹೋಗಬೇಕೋ ಎಂಬುದರ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ಆಗಸ್ಟ್‌ 5ರಂದು ದೆಹಲಿಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಅವರು ಹಿರಿಯ ವಕೀಲ ನಾರಿಮನ್‌ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಆ ನಂತರ ಸರ್ವಪಕ್ಷ ಸಭೆಯಲ್ಲಿ ಕಾನೂನು ಪರಿಣತರು, ತಾಂತ್ರಿಕ ಸಮಿತಿಯ ತಜ್ಞರ ಸಲಹೆ-ಸೂಚನೆ, ಅಭಿಪ್ರಾಯ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ನೆಲ- ಜಲ, ಗಡಿ, ಭಾಷೆ ವಿಚಾರದಲ್ಲಿ ನಾವು ಸದಾ ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುನ್ನಡೆದಿದ್ದೇವೆ. ಮಹದಾಯಿ ವಿಚಾರದಲ್ಲೂ ಅದೇ ರೀತಿ ಎಲ್ಲ ಪಕ್ಷಗಳ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯದ ಜನರ ಹಿತಾಸಕ್ತಿ ದೃಷ್ಟಿಯಿಂದ ಒಟ್ಟಾಗಿಯೇ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಮಹದಾಯಿ ಮಧ್ಯಂತರ ತೀರ್ಪು ಕುರಿತು ನ್ಯಾಯಾಧಿಕರಣದ ಮುಂದೆಯೇ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸೋಣ. ಆ ನಂತರ ಸುಪ್ರೀಂಕೋರ್ಟ್‌ಗೆ ಮೊರೆ ಹೋಗುವ ಬಗ್ಗೆ ಯೋಚಿಸುವುದು ಸೂಕ್ತ. ನಾವು ಏನೇ ಮಾಡಿದರೂ ಅಂತಿಮ ತೀರ್ಪಿಗೆ ಬಾಧಕವಾಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಂತಿಮ ತೀರ್ಪು ಬೇಗ ಪ್ರಕಟಿಸುವಂತೆ ನ್ಯಾಯಾಧಿಕರಣಕ್ಕೆ ಮನವಿ ಮಾಡಿ ಕಾಯುವುದು ಒಳ್ಳೆಯದು ಎಂದು ಸಭೆಯಲ್ಲಿ ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.

ಮಹದಾಯಿ ನ್ಯಾಯಾಧಿಕರಣದ ತೀರ್ಪು ವಿರೋಧಿಸಿ ಹೋರಾಟ ನಡೆಸಿದವರ ಮೇಲೆ ಪೊಲೀಸರು ಹಲ್ಲೆ ನಡೆಸಿ ಬಂಧಿಸಿದ ಪ್ರಕರಣಗಳ ಕುರಿತು ಪರಿಶೀಲನೆಗೆ ರಾಜ್ಯ ಸರ್ಕಾರ ಸಮಿತಿ ರಚಿಸಿದೆ. ಹಿರಿಯ ಪೊಲೀಸ್‌ ಅಧಿಕಾರಿ ರಾಘವೇಂದ್ರ ಔರಾದ್‌ಕರ್‌ ಅವರಿಗೆ ಈ ಸಮಿತಿಯ ನೇತೃತ್ವ ನೀಡಲಾಗಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ನ್ಯಾಯಾಧಿಕರಣದ ಮಧ್ಯಂತರ ತೀರ್ಪು ಬಂದ ನಂತರ ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆದಿವೆ. ಅಮಾಯಕರ ಮೇಲೆ ದೌರ್ಜನ್ಯ ನಡೆದಿರುವುದು ವಿಷಾದನೀಯ. ಪ್ರತಿಭಟನೆ ಹಾಗೂ ಧರಣಿಗೆ ಸಂಬಂಧಿಸಿದಂತೆ ಪೊಲೀಸರು 24 ಪ್ರಕರಣ ದಾಖಲಿಸಿ 181 ಮಂದಿಯನ್ನು ವಶಕ್ಕೆ ಪಡೆದಿದ್ದರು. ಇಂತಹ ಪ್ರಕರಣಗಳು ಜಾಮೀನು ರಹಿತವಾದ ಕಾರಣ ವಶಕ್ಕೆ ತೆಗೆದುಕೊಂಡವರನ್ನು ಜೈಲಿಗೆ ಕಳುಹಿಸಲಾಗಿದೆ. ಬಂಧಿತರೆಲ್ಲರೂ ಪುರುಷರಾಗಿದ್ದು, ಮಹಿಳೆಯರನ್ನು ಬಂಧಿಸಿಲ್ಲ.

ಆದರೆ, ಅಮಾಯಕರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂಬ ದೂರುಗಳಿವೆ. ಈ ಕುರಿತು ಪರಿಶೀಲಿಸಲು ಸಮಿತಿ ರಚಿಸಲಾಗಿದೆ. ಮೊಕದ್ದಮೆ ದಾಖಲಿಸಿರುವವರಲ್ಲಿ ವಿದ್ಯಾರ್ಥಿಗಳು, ಹಿರಿಯರು ಇದ್ದಾರೆಯೇ? ಯಾವ ಸೆಕ್ಷನ್‌ನಡಿ ಮೊಕದ್ದಮೆ ದಾಖಲಿಸಲಾಗಿದೆ? ಪ್ರಕರಣ ಕೈಬಿಡಬಹುದೇ ಎಂಬ ವಿಷಯಗಳ ಬಗ್ಗೆ ಸಮಿತಿ ಪರಾಮರ್ಶೆ ನಡೆಸಿ ವರದಿ ನೀಡಲಿದೆ. ಆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಅದೇ ರೀತಿ ನರಗುಂದ, ನವಲಗುಂದ, ಯಮನೂರು ಸೇರಿ ಕೆಲವೆಡೆ ನಡೆದ ಪೊಲೀಸ್‌ ಲಾಠಿಚಾರ್ಜ್‌ ಹಾಗೂ ಹಿಂಸಾಚಾರದ ಬಗ್ಗೆಯೂ ತನಿಖೆ ನಡೆಸಲು ಎಡಿಜಿಪಿ ಕಮಲ್‌ಪಂತ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English