66.50 ಲಕ್ಷ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿ ಆರೋಪಿಗಳ ಬಂಧನ

3:03 PM, Wednesday, December 28th, 2016
Share
1 Star2 Stars3 Stars4 Stars5 Stars
(No Ratings Yet)
Loading...

robbery-caseಮಳವಳ್ಳಿ: ಮಳವಳ್ಳಿ ತಾಲೂಕು ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯ ರಾಮಂದೂರು-ಕರಳಿಕೊಪ್ಪಲು ಮಧ್ಯೆ ನಡೆದ 66.50 ಲಕ್ಷ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಹೆಚ್.ಸುಧೀರ್‌‌ಕುಮಾರ್ ರೆಡ್ಡಿ ತಿಳಿಸಿದರು.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ದೊಡ್ಡಮುಲಗೂಡು ನಿವಾಸಿಗಳಾದ ದಿಲೀಪ ಅಲಿಯಾಸ್ ಜೆಸಿಬಿ ದಿಲೀಪ, ಆನಂದ ಅಲಿಯಾಸ್ ಸಿಸಿ ಟಿವಿ ಆನಂದ, ರಾಜೇಶ ಅಲಿಯಾಸ್ ರಾಜಿ, ಆನಂದ ಅಲಿಯಾಸ್ ಮೈಸೂರಮ್ಮನ ಮಗ ಆನಂದ, ಅಭಿಷೇಕ್ ಅಲಿಯಾಸ್ ಅಭಿ, ಪುರುಷೋತ್ತಮ, ವಾಸು, ಬಾಬು, ಮಳವಳ್ಳಿ ತಾಲೂಕು ರಾಮಂದೂರು ವಾಸಿಗಳಾದ ಉಮೇಶ್, ಚನ್ನಕೇಶವ, ಚೆಲುವರಾಜು, ಮಹದೇವಸ್ವಾಮಿ, ರಾಮಲಿಂಗ ಹಾಗೂ ಶ್ರವಣಬೆಳಗೊಳ ಸಮೀಪದ ಬೆಕ್ಕ ಗ್ರಾಮದ ಮಂಜ ಅಲಿಯಾಸ್ ಕಾರ್ ಮಂಜ ಬಂಧಿತ ಆರೋಪಿಗಳು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕಾರು, ಮೊಬೈಲ್‍ಗಳು, ಮೋಟಾರ್ ಸೈಕಲ್‍ಗಳು ಹಾಗೂ ದರೋಡೆ ಮಾಡಿದ್ದ 66.50 ಲಕ್ಷ ರೂ.ನಲ್ಲಿ 52.81 ಲಕ್ಷ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಡಿ. 12ರಂದು ಸಂಜೆ ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯ ರಾಮಂದೂರು-ಕರಳಿಕೊಪ್ಪಲು ಮಧ್ಯೆ ಕಾಲುವೆ ಬಳಿಯ ನಿರ್ಜನ ಪ್ರದೇಶದಲ್ಲಿ ಇಟಿಯಾಸ್ ಕಾರು ನಿಂತಿರುವ ಮಾಹಿತಿ ಆಧರಿಸಿ ಗಸ್ತಿನಲ್ಲಿದ್ದ ಪೊಲೀಸರು ಪರಿಶೀಲಿಸಿದಾಗ ಕಾರಿನ ಮುಂಭಾಗದ ಗ್ಲಾಸ್‍ಗೆ ಮೊಟ್ಟೆ ಹೊಡದಿರುವುದು, ಒಳಭಾಗದಲ್ಲಿ ಖಾರದ ಪುಡಿ ಚೆಲ್ಲಾಡಿರುವುದು ಕಂಡುಬಂದಿತ್ತು.

ಡಿ. 13ರಂದು ಮಂಡ್ಯ ತಾಲೂಕು ಕಾಳೇನಹಳ್ಳಿ ಪೋಸ್ಟ್‌ ಮಾಸ್ಟರ್ ಶ್ರೀನಿವಾಸ ಅವರು ನೀಡಿದ ದೂರಿನಲ್ಲಿ ಜ್ಯೋತಿ ಇಂಟರ್‌ನ್ಯಾಷನಲ್ ಹೋಟೆಲ್ ಮಾಲೀಕ ರಂಗಸ್ವಾಮಿ ಪುತ್ರ ಶ್ರೀನಿವಾಸ್ 2 ಸಾವಿರ ರೂ. ಮುಖಬೆಲೆಯ ಹೊಸ ನೋಟುಗಳನ್ನು ನೀಡಿ ಅದಕ್ಕಿಂತ ಹೆಚ್ಚು ಮೌಲ್ಯದ ಹಳೆಯ ನೋಟುಗಳನ್ನು ಕೊಡಿಸಿಕೊಡುವುದಾಗಿ ತಿಳಿಸಿದ್ದರು.

ಹಣ ಬದಲಾಯಿಸಿಕೊಳ್ಳಲು ಶ್ರೀನಿವಾಸ, ರಾಜು, ಮಂಜುಳಾ ಮತ್ತು ಆನಂದ ಎಂಬುವವರು ಇಟಿಯಾಸ್ ಕಾರಿನಲ್ಲಿ ಡಿ. 12ರಂದು ಮಧ್ಯಾಹ್ನ 2.45ರ ಸಮಯದಲ್ಲಿ ತೆರಳಿದ್ದರು. ಈ ಸಂದರ್ಭದಲ್ಲಿ ರಾಮಂದೂರು-ಕರಳಿಕೊಪ್ಪಲಿನ ಮಧ್ಯೆ ಇರುವ ಕಾಲುವೆ ಬಳಿ ಅಪರಿಚಿತರು ಮೊಟ್ಟೆಯಿಂದ ಕಾರಿನ ಮುಂಭಾಗದ ಗ್ಲಾಸ್‍ಗೆ ಹೊಡೆದು, ಕಾರಿನಲ್ಲಿದ್ದವರಿಗೆ ಖಾರದ ಪುಡಿ ಎರಚಿ ಹಣ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ದರೋಡೆಯಲ್ಲಿ ಪೋಸ್ಟ್‌ ಮಾಸ್ಟರ್ ಶ್ರೀನಿವಾಸ್ ಮತ್ತು ಅವರ ಸ್ನೇಹಿತ ಸ್ವಾಮಿ ಅವರ 10 ಲಕ್ಷ ರೂ., ರಂಗಸ್ವಾಮಿ ಮಗ ಶ್ರೀನಿವಾಸನಿಗೆ ಸೇರಿದ 14 ಲಕ್ಷ ರೂ, ಚೇತನ್‍ಗೆ ಸೇರಿದ 13 ಲಕ್ಷ ರೂ., ವಿನುಕುಮಾರ್ ಅವರ 10 ಲಕ್ಷ ರೂ. ರಾಜುಗೆ ಸೇರಿದ 20 ಲಕ್ಷ ರೂ. ಹಣ ಕಳೆದುಕೊಂಡಿರುವಾಗಿ ದೂರಿನಲ್ಲಿ ತಿಳಿಸಿದ್ದರು.

ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಹೊಸ ನೋಟುಗಳೊಂದಿಗೆ ತೆರಳುತ್ತಿರುವ ವಿಷಯವನ್ನು ಯಾರೋ ದುಷ್ಕರ್ಮಿಗಳಿಗೆ ತಿಳಿಸಿದ್ದರಿಂದ ಈ ಕೃತ್ಯ ನಡೆದಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English