ಭಗೀರಥ ಪ್ರಯತ್ನದಿಂದ ನಮ್ಮ ಬದುಕಿನಲ್ಲೂ ಒಳ್ಳೆಯ ಗುರಿ ತಲುಪಬಹುದು : ಐವನ್

5:20 PM, Saturday, May 6th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Bhagirata Jayanthiಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀನಿವಾಸ ವಿಶ್ವವಿದ್ಯಾನಿಲಯ ಪಾಂಡೇಶ್ವರ ಹಾಗೂ ಮಂಗಳೂರು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಶನಿವಾರ ಮಂಗಳೂರಿನ ಪಾಂಡೇಶ್ವರದ ಶ್ರೀನಿವಾಸ ಕಾಲೇಜಿನ ಸಭಾಂಗಣದಲ್ಲಿ ಭಗೀರಥ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.

ಉದ್ಘಾಟನೆ ನೆರವೇರಿಸಿದ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ, ಪ್ರಯತ್ನದಿಂದ ಯಶಸ್ಸನ್ನು ಸಾಧಿಸಬಹುದು ಎಂಬುದನ್ನು ಭಗೀರಥ ಮಹರ್ಷಿ ತೋರಿಸಿ ಕೊಟ್ಟಿದ್ದಾರೆ, ಉತ್ತಮ ಪ್ರಯತ್ನದಿಂದ  ನಾವೂ ಕೂಡ ಯಶಸ್ಸಿನ ಗುರಿ ತಲುಪಬಹುದು ಎಂದು ಐವನ್ ಹೇಳಿದರು.

ನಿಶ್ವಾರ್ಥದಿಂದ ಸಮಾಜದ ಅಭಿವೃದ್ಧಿಗೆ ನಾವು ಶ್ರಮಿಸಬೇಕು. ಅಸಾಧ್ಯವಾದುದನ್ನು ಸಾಧಿಸಿ, ಭಗೀರಥ ಪ್ರಯತ್ನದಿಂದ ನಮ್ಮ ಬದುಕಿನಲ್ಲೂ ಒಳ್ಳೆಯ ಗುರಿ ತಲುಪಬಹುದು ಎಂದವರು ಹೇಳಿದರು.

ಭಗೀರಥ ಜಯಂತಿ ಆಚರಣೆಯ ಕುರಿತಂತೆ ಉಪನ್ಯಾಸಕ, ಯಕ್ಷಗಾನ ಅರ್ಥಧಾರಿ ವಾದಿರಾಜ ಕಲ್ಲೂರಾಯ ಉಪನ್ಯಾಸ ನೀಡಿ, ನಮ್ಮಲ್ಲಿನ ಅರಿಷಡ್ವರ್ಗಗಳನ್ನು ಗೆದ್ದರೆ ಯಶಸ್ಸನ್ನು ಕಾಣಲು ಸಾಧ್ಯವಿದೆ ಎಂದರು. ನೀರನ್ನು ತನ್ನಷ್ಟಕ್ಕೆ ಹರಿಯಬಿಡಬೇಕು. ಅದನ್ನು ತಿರುಗಿಸುವ ಪ್ರಯತ್ನ ಮಾಡಿದರೆ ದೊಡ್ಡ ಆಪತ್ತು ತಪ್ಪಿದ್ದಲ್ಲ. ಹಾವು ಕಚ್ಚಿದರೆ ಮದ್ದು ಇದೆ. ಆದರೆ ನೀರು ಮತ್ತು ಭೂಮಿ ತಿರುಗಿ ಬಿದ್ದರೆ ಯಾವ ಮದ್ದೂ ಇಲ್ಲ ಎಂದು ಎತ್ತಿನಹೊಳೆ ಯೋಜನೆಯಿಂದಾಗುವ ಅಪಾಯವನ್ನು ಅವರು ಯೋಜನೆಯ ಹೆಸರು ಹೇಳದೆ ಪರೋಕ್ಷವಾಗಿ ಅಪಾಯವನ್ನು ಬೊಟ್ಟು ಮಾಡಿದರು.

ಮಂಗಳೂರು ತಹಶೀಲ್ದಾರ್ ಸಿ.ಮಹಾದೇವಯ್ಯ, ಮಂಗಳೂರು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ಶ್ರೀನಿವಾಸ ವಿಶ್ವವಿದ್ಯಾನಿಲಯದ ಕುಲಸಚಿವ ಪಿ.ಎಸ್.ಐತಾಳ್, ಬಿಎಡ್ ಕಾಲೇಜಿನ ಪ್ರಾಂಶುಪಾಲೆ ಡಾ.ಜಯಶ್ರೀ ಕೆ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಸ್ವಾಗತಿಸಿದರು. ವಿಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English