ವೇಲಾಂಕಣ್ಣಿ ಪುಣ್ಯಕ್ಷೇತ್ರಕ್ಕೆ ಹೊರಟ ಏಳು ಮಂದಿ ದುರ್ಮರಣ

9:55 PM, Saturday, May 13th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Velankaniಕಾಸರಗೋಡು : ತಮಿಳುನಾಡಿನ ಕರೂರು ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾಸರಗೋಡು ಕಯ್ಯಾರು ಮಂಡೆಕಾಪಿನ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟ ಘಟನೆ ವರದಿಯಾಗಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಮೃತಪಟ್ಟವರನ್ನು ಮಂಡೆಕಾಪುವಿನ ಹೆರಾಲ್ಡ್ ಮೊಂತೇರೊ(50), ಅವರ ಪತ್ನಿ ಪ್ರಸಿಲ್ಲ(42), ಪುತ್ರ ರೋಹಿತ್(22), ಹೆರಾಲ್ಡ್ ಅವರ ಸಹೋದರ ಸತುರಿನ್‌ಮೊಂತೇರೊ(37), ಪುತ್ರಿ ಶರೋನ್(5), ಆಲ್ವಿನ್(29), ಡೆನ್ಝಿಲ್ ಎಂಬವರ ಪತ್ನಿ ರೀಮಾ ( 37) ಎಂದು ಗುರುತಿಸಲಾಗಿದೆ. ಹೆರಾಲ್ಡ್‌ರ ಇನ್ನೋರ್ವ ಪುತ್ರ ರೋಶನ್(22), ಸತುರಿನ್‌ರ ಪತ್ನಿ ಜೀಶ್ಮಾ(26), ಇನ್ನೋರ್ವ ಪುತ್ರಿ ಶಾನ್ವಿ(ಒಂದೂವರೆ ವರ್ಷ), ಆಲ್ವಿನ್‌ರ ಪತ್ನಿ ಪ್ರೀಮಾ(26)ರನ್ನು ತಿರುಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಲ್ವಿನ್ ಮತ್ತು ಪ್ರೀಮಾರ ವಿವಾಹವು ಮೇ 6ರಂದು ನೆರವೇರಿತ್ತು. ಈ ಹಿನ್ನೆಲೆಯಲ್ಲಿ ಮೇ 11ರಂದು ರಾತ್ರಿ ಕುಟುಂಬದ 11 ಮಂದಿ ತಮಿಳುನಾಡಿನ ನಾಗಪಟ್ಟಿಣಂನಲ್ಲಿರುವ ವೇಲಾಂಕಣ್ಣಿ ಪುಣ್ಯಕ್ಷೇತ್ರಕ್ಕೆ ಸ್ಕಾರ್ಫಿಯೋ ಕಾರಿನಲ್ಲಿ ತೆರಳಿದ್ದರು. ಅಲ್ಲಿದ ವಾಪಸ್ ಆಗುತ್ತಿದ್ದ ವೇಳೆ ತಿರುಚ್ಚಿ ಕರೂರಿನಲ್ಲಿ ಇವರಿದ್ದ ಕಾರಿಗೆ ಸರಕು ಸಾಗಾಟದ ಲಾರಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಮೃತಪಟ್ಟ ಹೆರಾಲ್ಡ್ ಮೊಂತೇರೊ ಪುಣೆಯಲ್ಲಿ ಉದ್ಯೋಗದಲ್ಲಿದ್ದು, 25 ವರ್ಷಗಳಿಂದ ಅಲ್ಲೇ ವಾಸಿಸುತ್ತಿದ್ದರು. ಸತುರಿನ್ ಮೊಂತೇರೊ ಗಲ್ಫ್ ನಲ್ಲಿದ್ದರು. ಇವೆರೆಲ್ಲ ಸಹೋದರ ಆಲ್ವಿನ್‌ ವಿವಾಹಕ್ಕೆಂದು ಆಗಮಿಸಿದ್ದರು. ಅಪಘಾತ ಸುದ್ದಿ ತಿಳಿದು ಸಂಬಂಧಿಕರು ಶನಿವಾರ ಬೆಳಗ್ಗೆ ತಿರುಚ್ಚಿಗೆ ತೆರಳಿದ್ದಾರೆ. ಮೇ 15ರಂದು ಮೃತದೇಹಗಳನ್ನು ಊರಿಗೆ ತರಲಾಗುವುದು. ಸಂಜೆ 3:30ಕ್ಕೆ ಕಯ್ಯಾರು ಕ್ರಿಸ್ತರಾಜ ದೇವಾಲಯದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ

ದುರಂತಕ್ಕೀಡಾದವರ ಮಂಡೆಕಾಪಿನ ಮನೆಗೆ ಕರ್ನಾಟಕ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಕಾಸರಗೋಡು ಜಿಪಂ ಅಧ್ಯಕ್ಷ ಎ.ಜಿ.ಸಿ.ಬಶೀರ್, ಸದಸ್ಯ ಹರ್ಷಾದ್ ವರ್ಕಾಡಿ ಮೊದಲಾದವರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ನವವಿವಾಹಿತ ಆಲ್ವಿನ್: ಗಲ್ಫ್ ಉದ್ಯೋಗಿಯಾಗಿದ್ದ ಆಲ್ವಿನ್ ಹಾಗೂ ಧರ್ಮತ್ತಡ್ಕ ನೆರೋಲ್ ಪಾವ್ಲ್ ರೊಡ್ರಿಗಸ್‌ರ ಪುತ್ರಿ ಪ್ರೀಮರ ವಿವಾಹವು ಮೇ 6ರಂದು ನಡೆದಿತ್ತು. ಗಾಯಾಳು ಪ್ರೀಮಾ ಉತ್ತರಪ್ರದೇಶದ ಲಕ್ನೋದಲ್ಲಿ ಶಿಕ್ಷಕಿಯಾಗಿ ದುಡಿಯುತ್ತಿದ್ದಾರೆ.

ಹೆರಾಲ್ಡ್ ಸಹೋದರ ಡೆನ್ಝಿಲ್ ಮೊಂತೇರೊ ಕೂಡಾ ವೆಲಂಕಣ್ಣಿಗೆ ತೆರಳುವರಿದ್ದರು. ಆದರೆ ವಾಹನದಲ್ಲಿ ಸ್ಥಳದ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದರು. ಅವರ ಪತ್ನಿ ರೀಮಾ ತೆರಳಿದ್ದು, ಅಪಘಾತಕ್ಕೆ ಬಲಿಯಾಗಿದ್ದಾರೆ

ಅಪಘಾತಕ್ಕೆ ಬಲಿಯಾದವರ ಮೃತದೇಹಗಳನ್ನು ಊರಿಗೆ ತಲುಪಿಸಲು ಕೇರಳ ಸರಕಾರ ಆ್ಯಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಿದೆ ಹಾಗೂ ಗಾಯಾಳುಗಳ ಚಿಕಿತ್ಸೆ ಹಾಗೂ ಇತರ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English