ಕೇಂದ್ರ ಸರ್ಕಾರ ತನ್ನ ಸಾಧನೆಯ ಬಗ್ಗೆ ಶ್ವೇತಪತ್ರ ಹೊರಡಿಸಲಿ – ಐವನ್

1:11 PM, Thursday, May 18th, 2017
Share
1 Star2 Stars3 Stars4 Stars5 Stars
(No Ratings Yet)
Loading...

Ivanಮಂಗಳೂರು : ಕೇಂದ್ರ ಸರ್ಕಾರ ತನ್ನ ಸಾಧನೆಯ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಕೇಂದ್ರ ಸರ್ಕಾರ  ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸುತ್ತಿದೆ. ಆದರೆ ಯಾವುದೇ ಜನೋಪಯೋಗಿ ಯೋಜನೆಯನ್ನು ಕೈಗೊಂಡಿಲ್ಲ. ಆದ್ದರಿಂದ ರೈತರಿಗೆ, ಕಾರ್ಮಿಕರಿಗೆ ಹಾಗೂ ಜನಸಾಮಾನ್ಯರಿಗೆ ಅಚ್ಛೇ ದಿನ್ ಇನ್ನೂ ಬಂದಿಲ್ಲ. ಕೇವಲ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕಂಪನಿಗಳಿಗೆ ಅಚ್ಛೇ ದಿನ್ ಬಂದಿದೆ. ನೋಟು ಅಮಾನ್ನೀಕರಣದಿಂದಾಗಿ ಬಡವರು ಕಂಗಾಲಾಗಿದ್ದಾರೆ. ಕಪ್ಪು ಹಣವನ್ನು ವಿದೇಶದಿಂದ ತಂದು ಪ್ರತಿಯೊಬ್ಬರ ಖಾತೆಗೆ ಜಮೆ ಮಾಡುವುದಾಗಿ ನೀಡಿದ ಭರವಸೆ ಹುಸಿಯಾಗಿದೆ ಎಂದರು.

ಜನತೆಗೆ ಚುನಾವಣೆಯ ವೇಳೆ ನೀಡಿದ ಭರವಸೆಯನ್ನೂ ಈಡೇರಿಸಿಲ್ಲ. ಅದರ ಬದಲು ಪ್ರಧಾನಿಯವರು ಕೇವಲ ಮನ್ ಕಿ ಬಾತ್ ಮೂಲಕ ಮಾತುಗಳಿಂದ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದರಿಂದ ರೈತರಿಗೆ, ಕಾರ್ಮಿಕರಿಗೆ ಏನೂ ಲಾಭ ಆಗಿಲ್ಲವೆಂದು ಐವನ್ ಡಿಸೋಜಾ ಲೇವಡಿ ಮಾಡಿದರು.

ರಾಜ್ಯದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌‌ಗಳಲ್ಲಿ 45 ಲಕ್ಷ ಕೋಟಿ ಸಾಲ ಇದೆ. ಇದರಲ್ಲಿ 11 ಲಕ್ಷ ಕೋಟಿ ಸಾಲ ಸಹಕಾರಿ ಸಂಘಗಳಲ್ಲಿದೆ. ಕೇವಲ ಸಹಕಾರಿ ಸಂಘಗಳ ಸಾಲವನ್ನು ಮನ್ನಾ ಮಾಡಿದರೆ ಅದರ ಪ್ರಯೋಜನ ಶೇ.20 ಮಂದಿ ರೈತರಿಗೆ ಮಾತ್ರ ಸಿಗುತ್ತದೆ. ಕೇಂದ್ರ ಸರ್ಕಾರ ಸಾಲ ಮನ್ನಾ ಯೋಜನೆಯಲ್ಲಿ ಶೇ.50 ಭಾಗವನ್ನು ನೀಡಿದರೆ, ಎಲ್ಲ ರೈತರಿಗೂ ಪ್ರಯೋಜನ ಸಿಗಲು ಸಾಧ್ಯವಿದೆ. ಹಾಗಾಗಿ ಕೇಂದ್ರವೂ ಸಾಲ ಮನ್ನಾಗೆ ಕೈಜೋಡಿಸುವಂತೆ ಮುಖ್ಯಮಂತ್ರಿ ಆಗ್ರಹಿಸಿದ್ದಾರೆ.

ಒಂದು ವೇಳೆ ಕೇಂದ್ರ ಸರ್ಕಾರ ಸ್ಪಂದಿಸದೇ ಇದ್ದರೆ ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಲು ಹಿಂದೇಟು ಹಾಕದು ಎಂದು ಐವನ್ ಡಿಸೋಜಾ ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English