ಕನ್ನಡ ಶಾಂತಿ ಸಾರುವ ಭಾಷೆ; ಆಸ್ಟ್ರೇಲಿಯಾ 13 ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ – ಡಾ. ಹಂಸಲೇಖ

9:05 PM, Friday, May 19th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

13 th Vishwa Kannada Sahitya Sammelanaಮೆಲ್ಬರ್ನ್ (ಆಸ್ಟ್ರೇಲಿಯಾ) : ಯುನೈಟೆಡ್ ಕನ್ನಡ ಸಂಘ, ಆಸ್ಟ್ರೇಲಿಯಾ ಮತ್ತು ಮಂಜುನಾಥ್ ಎಜುಕೇಷನ್ ಟ್ರಸ್ಟ್ (ರಿ) ಮಂಗಳೂರು ಸಂಯುಕ್ತವಾಗಿ ಮೇ13, ಮತ್ತು 14 ರಂದು ಮೆಲ್ಬರ್ನ್ ಮತ್ತು ಸಿಡ್ನಿಯಲ್ಲಿ 13ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಆಯೋಜಿಸಿದ್ದವು.

ಸಮ್ಮೇಳನವನ್ನು ಕಿಂಗ್‌ಸ್ಟನ್ ಆರ್ಟ್ಸ್ ಸೆಂಟರ್ ಆಡಿಟೋರಿಯಂನ ದಿ.ಡಾ.ಕೆ.ಎ ಅಶೋಕ್ ಪೈ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ.ಹಂಸಲೇಖ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಕನ್ನಡ ಶಾಂತಿ ಸಾರುವ ಭಾಷೆ. ಕನ್ನಡ ಭಾಷೆಯ ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ ಎಲ್ಲಿಯೂ ನೀವು ಕೆರಳಿಸುವ ಸಾಹಿತ್ಯವನ್ನು ನೋಡಲಾರಿರಿ. ತಮ್ಮ ಸಾಹಿತ್ಯದ ಮೂಲಕ ದಾಸರು ಮತ್ತು ವಚನಕಾರರು ಉಲ್ಬಣಸ್ಥಿತಿಯನ್ನು ತಹಬಂದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸಾಮಾಜಿಕ ತಾರತಮ್ಯದಿಂದ ಜನ ರೋಸಿ ಹೋದಾಗ ಬಸವಣ್ಣನವರು ತಮ್ಮ ವಚನಗಳ ಮೂಲಕ ಮೂಲಭೂತವಾದಿಗಳ ಮನಪರಿವರ್ತನೆ ಮಾಡುವಲ್ಲಿ ಯಶಸ್ವಿಯಾದರು. ಇದು ಬಸವಣ್ಣನವರು ಶಾಂತಿಗಾಗಿ ಮಾಡಿದ ಕ್ರಾಂತಿ ಎಂದರು.

13 th Vishwa Kannada Sahitya Sammelanaಪ್ರಾಸ್ತಾವಿಕ ಭಾಷಣ ಮಾಡಿದ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ಸ್ಥಾಪಕ ಅಧ್ಯಕ್ಷ ಇಂ.ಕೆ.ಪಿ ಮಂಜುನಾಥ್ ಸಾಗರ್ ಮಾತನಾಡಿ ನಾವು ಹದಿಮೂರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸಮ್ಮೇಳನಗಳು ಜಗತ್ತಿನಾದ್ಯಂತ ಇರುವ ಕನ್ನಡಿಗರನ್ನು ಒಂದು ವೇದಿಕೆಯಡಿ ತರುವ ಪ್ರಯತ್ನ ಯಶಸ್ವಿಯಾಗುತ್ತಿರುವುದಕ್ಕೆ ನಮಗೆ ಸಂತಸವಾಗುತ್ತಿದೆ. 13ನೇ ಸಮ್ಮೇಳನದ ವೇದಿಕೆಗೆ ಡಾ. ಕೆ.ಎ ಅಶೋಕ ಪೈಯವರ ಹೆಸರನ್ನಿಡಲು ಕಾರಣ ನಮ್ಮ ಪ್ರಥಮ ಸಮ್ಮೇಳನ 2008 ರಲ್ಲಿ ಅಬುಧಾಬಿಯಲ್ಲಿ ನಡೆದಾಗ ಅವರು ಅದರ ಸರ್ವಾಧ್ಯಕ್ಷರಾಗಿದ್ದರು. ಅವರು ಸಮ್ಮೇಳನಕ್ಕೆ ಘನತೆ ಮತ್ತು ಗೌರವವನ್ನು ತಂದುಕೊಟ್ಟರು. ಇದು ಡಾ. ಕೆ.ಎ ಅಶೋಕ ಪೈಯವರ ಸಂಸ್ಮರಣೆ ಕೂಡ ಆಗಿದೆ ಎಂದು ಹೇಳೀದರು.

ಯುನೈಟೆಡ್ ಕನ್ನಡ ಸಂಘದ ಅಧ್ಯಕ್ಷ ಶ್ರೀ ಮಂಜುನಾಥ್ ಎಂ. ಹೆಚ್ ಅತಿಥಿಗಳನ್ನು ಸ್ವಾಗತಿಸಿ ಸಭಾಭವನದಲ್ಲಿ ಕನ್ನಡಿಗರು ಕಿಕ್ಕಿರಿದು ತುಂಬಿರುವುದು ಮುಂದೆ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಮಗೆ ಪ್ರೇರಣೆ ನೀಡಿದೆ ಎಂದರು.

ಮುಖ್ಯ ಅತಿಥಿ ಹಾಗೂ ಚಿತ್ರನಟ ಡಾ. ಮುಖ್ಯ ಅತಿಥಿ ಚಂದ್ರು ಅವರು ಮಾತನಾಡಿ ಇಂಗ್ಲೀಷ್ ಭಾಷೆ ಉಳಿದ ಭಾಷೆಗಳನ್ನು ಅಳಿವಿನಂಚಿಗೆ ತಳ್ಳುತ್ತಿದೆ ಎಂಬ ಅಳುಕು ಜಗತ್ತಿನಾದ್ಯಂತ ಇದೆ. ಆದರೆ ಅದು ಸತ್ಯವಲ್ಲ, ಕನ್ನಡ ಎಲ್ಲಾ ಕಾಲಘಟ್ಟಗಳಲ್ಲೂ ತನ್ನದೆ ಆದ ವಿಶಿಷ್ಟ ಛಾಪು ಮೂಡಿಸುತ್ತ ಇನ್ನಷ್ಟು ಸಂವೃದ್ಧವಾಗುತ್ತಿದೆ. ಅದಕ್ಕೆ ಕಾರಣ ಕರ್ನಾಟಕ ಸರಕಾರದ ಕಾರ್ಯಕ್ರಮಗಳು ಮತ್ತು ಕನ್ನಡ ಪರ ಸಂಘಟನೆಗಳು ಎಂದರು.

13 th Vishwa Kannada Sahitya Sammelanaವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಸಮಿತಿ ಗೌರವಾಧ್ಯಕ್ಷ ಡಾ.ಕಡಬಂ ರಮೇಶ್ ಆಗ್ನೇಯ ಪಧವೀದರರ ಕ್ಷೇತ್ರದ ವಿಧಾನ ಪರಿಷತ್ ಶಾಸಕ ಶ್ರೀ ಆರ್. ಚೌಡ ರೆಡ್ಡಿ ಆಸ್ಟ್ರೇಲಿಯಾದ ಭಾರತೀಯ ಮೂಲದ ಸ್ಥಳೀಯ ರಾಜಕೀಯ ಮುಖಂಡರಾದ ಶ್ರೀ ಗಾಂಧೀ ಬೇವಿನಕೊಪ್ಪ ಮತ್ತು ಲಿಬರಲ್ ಪಾರ್ಟಿಯ ಶ್ರೀ ರಾಮ್‌ಪಾಲ್ ಜಾಗತಿಕ ಸಾಮರಸ್ಯದ ಕುರಿತು ಮಾತನಾಡಿದರು.

ವಿಶೇಷ ಆಮಂತ್ರಿರಾದ ಆಸ್ಟ್ರೇಲಿಯಾದ ಮಾನವ ಸೇವೆ ಖಾತೆ ಮಾನ್ಯ ಸಚಿವರಾದ ಶ್ರೀ ಅಲನ್ ಟುಡ್ಜ್ ಮಾತನಾಡಿ ನಮ್ಮದು ಬಹು ಸಂಸ್ಕೃತಿಯ ದೇಶ, ಕಲೆ ಮತ್ತು ಸಾಹಿತ್ಯವನ್ನು ವಿಶೇಷ ಗೌರವದಿಂದ ಕಾಣುತ್ತೇವೆ. ಕನ್ನಡಿಗರ ಜಾಗತಿಕ ಸಮಾವೇಶ ನಮಗೆ ವಿಶೇಷ ಮತ್ತು ರೋಮಾಂಚನದ ಅನುಭವವನ್ನು ನೀಡಿದೆ. ಈ ಸಾಂಸ್ಕೃತಿಕ ಸಮಾರಂಭ ಎರಡ ದೇಶಗಳ ಭಾಂದವ್ಯಕ್ಕೆ ಕಿರುಕಾಣಿಕೆ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ನನಗನ್ನಿಸುತ್ತದೆ ಎಂದರು.

ವಿಕ್ಟೋರಿಯಾ ರಾಜ್ಯದ ಛಾಯ ಸಚಿವೆ ಶ್ರೀಮತಿ ಇಗ್ನಾ ಪೆಲಿಟ್ ಸಂಸತ್ ಸದಸ್ಯರಾದ ಶ್ರೀ ಸ್ಟ್ಯಾಕೋಸ್ ಮತ್ತು ಗೌ. ಜುಲಿಯಾ ಫಿನ್ ಅವರು ಕನ್ನಡಿಗರು ಮತ್ತು ಭಾರತ ಮೂಲದವರ ಕೊಡುಗೆಗೆ ಮೆಚ್ಚುಗೆಯ ಮಾತುಗಳನ್ನಾಡಿದವರು.

ಸಾಹಿತಿ ಚಂದ್ರಶೇಖರ ಗಟ್ಟಿ ಬೋಳೂರು ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರುಗಿತು.

ಖ್ಯಾತ ಹಾಸ್ಯ ನಟರಾದ ಮಂಡ್ಯ ರಮೇಶ್ ಮತ್ತು ನವೀನ್ ಕುಮಾರ್ ಪಡೀಲ್ ಅವರು ನಡೆಸಿಕೊಟ್ಟ ಹಾಸ್ಯ ಪ್ರಸಂಗ ರಾತ್ರಿ ಶಾಲೆಗೆ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಕ್ಕರು, ಧಾರವಾಡದ ಮಹದೇವ ಸತ್ತಿಗೇರಿ ಅವರ ಹಾಸ್ಯದ ಹೊನಲುವನ್ನು ಎಲ್ಲರೂ ಮೆಚ್ಚಿಕೊಂಡರು.

ಪುಷ್ಕರ ಫರ್‌ಫಾರ್ಮಿಂಗ್ ಆರ್ಟ್ಸ್ ಬೆಂಗಳೂರು ಮತ್ತು ಕೈಲಾಸ ಕಲಾಧರ ಕಲ್ಚರಲ್ ಟ್ರಸ್ಟ್ ಬೆಂಗಳೂರು ತಂಡಗಳ ಭರತನಾಟ್ಯ ಮತ್ತು ಜನಪರ ನೃತ್ಯಗಳು ಪ್ರದರ್ಶನವನ್ನು ಸ್ಥಳೀಯ ಗಣ್ಯರೂ ಕೂಡ ಮುಕ್ತ ಕಂಠದಿಂದ ಪ್ರಶಂಶಿಸಿದರು.

ಶ್ರೀಮತಿ ಲತಾ ಹಂಸಲೇಖ ಗೋ.ನಾ ಸ್ವಾಮಿ, ಗೀತಾ ಸತ್ಯಮೂರ್ತಿ ಮತ್ತು ಶಿವರಾಜ್ ಮಂಗಳೂರು ಅವರ ರಸಮಂಜರಿ ಸ್ವರ ಸೌರಭ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ರಂಗಪುತ್ಥಳಿ ಬೆಂಗಳೂರು ತಂಡದ ತೊಗಲು ಬೊಂಬೆಯಾಟ ವಿಶಿಷ್ಟ ಲೋಕವನ್ನೇ ಸೃಷ್ಟಿಸಿತ್ತು.

ಯುನೈಟೆಡ್ ಕನ್ನಡ ಸಂಘದ ಕಾರ್ಯದರ್ಶಿ ಶ್ರೀಸುರೇಶ್ ಗೌಡ ಧನ್ಯವಾದ ಸಮರ್ಪಣೆ ಮಾಡಿದರು. ಕು| ಸಿಂಧು ಕಾರ್ಯಕ್ರಮ ನಿರೂಪಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English