ಪುರಭವನದಲ್ಲಿ ಜನಮನ-ಫಲಾನುಭವಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸಂವಾದ

9:06 PM, Saturday, May 20th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Janamanaಮಂಗಳೂರು : ದ.ಕ.ಜಿಲ್ಲಾಡಳಿತ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ನಗರದ ಪುರಭವನದಲ್ಲಿ  ‘ಜನಮನ-ಫಲಾನುಭವಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸಂವಾದ’ ಕಾರ್ಯಕ್ರಮ ನಡೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವು ಅನೇಕ ಜನಪರ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದು, ಅವೆಲ್ಲವೂ ಸ್ವಾಭಿಮಾನದ ಬದುಕಿಗೆ ಪೂರಕವಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.

ರಾಜ್ಯ ಸರಕಾರ 4 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರ ಜೊತೆ ಏರ್ಪಡಿಸಿದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣಾ ಸಂದರ್ಭ ನೀಡಿದ ಸಾಕಷ್ಟು ಆಶ್ವಾಸನೆಗಳನ್ನು ರಾಜ್ಯ ಸರಕಾರ ಬಹುತೇಕ ಈಡೇರಿಸಿದೆ. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯರ ದೂರದೃಷ್ಟಿಯ ಯೋಜನೆಗಳು ಜನರ ಮನಸ್ಸನ್ನು ಗೆದ್ದಿವೆ. ಜಾತಿರಹಿತ ಸಮಾಜ ಕಟ್ಟುವುದು ಅವರ ಮುಖ್ಯ ಗುರಿಯಾಗಿತ್ತು. ಎಲ್ಲರ ಸಹಕಾರದಿಂದ ಅದು ಈಡೇರುತ್ತಾ ಬಂದಿದೆ. ರಾಜ್ಯ ಸರಕಾರದ ಕ್ಷೀರಧಾರೆ, ಕ್ಷೀರಭಾಗ್ಯ, ಮೈತ್ರಿ, ವಿದ್ಯಾಸಿರಿ, ಅನ್ನಭಾಗ್ಯ, ಕೃಷಿಭಾಗ್ಯ, ರಾಜೀವ್ ಆರೋಗ್ಯ ಭಾಗ್ಯ, ಶುದ್ಧ ನೀರು, ಋಣಮುಕ್ತ, ವಸತಿ ಭಾಗ್ಯ, ಸೌರಭಾಗ್ಯ, ಶಾದಿಭಾಗ್ಯ, ಪಶುಭಾಗ್ಯ, ಹನಿ ನೀರಾವರಿ, ಮನಸ್ವಿನಿ, ನಿರ್ಮಲಭಾಗ್ಯ ಹೀಗೆ ಹಲವಾರು ಯೋಜನೆಗಳ ಪ್ರಯೋಜನವನ್ನು ದ.ಕ.ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದಿದ್ದಾರೆ ಎಂದು ರಮಾನಾಥ ರೈ ನುಡಿದರು.

ವಿವಿಧ ನಿಗಮಗಳ ಮೂಲಕ ಪಡೆದ ಸಾಲಗಳ ಮನ್ನಾ, ರೈತರ ವಿದ್ಯುತ್ ಬಿಲ್ ಮನ್ನಾ ಹಾಗು ಕುಮ್ಕಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಬಲಾಢ್ಯರಿಂದ ಭೂಮಿಯನ್ನು ಮರಳಿ ಪಡೆದು ಅರ್ಹರಿಗೆ ಮನೆ ನಿವೇಶನಕ್ಕೆ ಹಂಚಿಕೊಡುವ ಮೂಲಕ ಐತಿಹಾಸಿಕ ನಿರ್ಧಾರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ. ಗಲ್ಫ್ ಕನ್ನಡಿಗರಿಗೆ ಕೇರಳ ಮಾದರಿಯ ಸೌಲಭ್ಯ, ಕೃಷಿ ಭಾಗ್ಯ ಯೋಜನೆಯನ್ನು ಕರಾವಳಿಗೆ ವಿಸ್ತರಣೆ, ಜನಸಂಖ್ಯಾ ಆಧಾರದ ಮೇಲೆ ಬಜೆಟ್‌ನಲ್ಲಿ ಹಣ ಮೀಸಲು ಅಷ್ಟೇ ಅಲ್ಲ, ಈ ಎಲ್ಲ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ನಿರ್ಲಕ್ಷ ವಹಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರಗಿಸುವಂತಹ ದಿಟ್ಟ ನಿರ್ಧಾರವನ್ನೂ ಮುಖ್ಯಮಂತ್ರಿ ತಾಳಿದ್ದರು ಎಂದು ಸಚಿವ ರಮಾನಾಥ ರೈ ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ರಾಜ್ಯದ 6 ಕೋಟಿ ಜನಸಂಖ್ಯೆಯ ಪೈಕಿ 5 ಕೋಟಿಗೂ ಅಧಿಕ ಮಂದಿ ಸಿದ್ದರಾಮಯ್ಯರ ಯೋಜನೆಗಳು ತೃಪ್ತಿ ತಂದಿವೆ. ದ.ಕ.ಜಿಲ್ಲೆಯ ಅಲ್ಪಸಂಖ್ಯಾತರ ಕಾಲನಿಗಳ ಅಭಿವೃದ್ಧಿಗೆ ಈ ಸಾಲಿನ ಬಜೆಟ್‌ನಲ್ಲಿ 800 ಕೋ.ರೂ. ಮೀಸಲಿಟ್ಟು ಗಮನ ಸೆಳೆದಿದ್ದಾರೆ. ಜಿಲ್ಲೆಯ 1206 ಕೊರಗ ಕುಟುಂಬಗಳಿಗೆ ಬೇರೆ ಬೇರೆ ಯೋಜನೆಯಡಿ ಸ್ಪಂದಿಸಿದೆ ಎಂದರು.

ವೇದಿಕೆಯಲ್ಲಿ ಶಾಸಕ ಅಭಯಚಂದ್ರ ಜೈನ್, ಮೇಯರ್ ಕವಿತಾ ಸನಿಲ್, ಉಪಮೇಯರ್ ರಜನೀಶ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ದ.ಕ.ಜಿಪಂ ಸಿಇಒ ಡಾ.ಎಂ.ಆರ್.ರವಿ, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ಕುಮಾರ್ ಸ್ವಾಗತಿಸಿದರು. ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯ ಸರಕಾರವು ದ.ಕ.ಜಿಲ್ಲೆಗೆ ನೀಡಿದ ಕೊಡುಗೆಗಳ ಮಾಹಿತಿಯುಳ್ಳ ಪುಸ್ತಿಕೆಯನ್ನು ಸಚಿವ ರಮಾನಾಥ ರೈ ಬಿಡುಗಡೆಗೊಳಿಸಿದರು.

ವಿವಿಧ ಇಲಾಖೆಗಳ ಆಯ್ದ ಫಲಾನುಭವಿಗಳ ಜೊತೆ ಸಚಿವ ರೈ ನಡೆಸಿದ ಸಂವಾದದಲ್ಲಿ ಹಲವರು ಸರಕಾರದ ಯೋಜನೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಕಷ್ಟ ಕಾಲದಲ್ಲಿ ತಾವು ಸರಕಾರದ ವಿವಿಧ ಭಾಗ್ಯಗಳ ಪ್ರಯೋಜನ ಪಡೆದ ಕಥೆಯನ್ನು ಬಿಚ್ಚಿಟ್ಟರು. ಅದರಲ್ಲೂ ಮುಚ್ಚೂರು ಅಂಗನವಾಡಿ ಕೇಂದ್ರದ ಪುಟಾಣಿಗಳು ಕ್ಷೀರಭಾಗ್ಯ ಯೋಜನೆಯ ಬಗ್ಗೆ ತೊದಲು ನುಡಿಯಲ್ಲಿ ಪ್ರಶಂಸೆ ವ್ಯಕ್ತಪಡಿಸಿ ಗಮನ ಸೆಳೆದರು.

ಕುಪ್ಪೆಪದವಿನ ಅಹ್ಮದ್ ಬಾವಾ ಮಾತನಾಡಿ ನಮ್ಮದು 7 ಮಂದಿಯ ಸಂತೃಪ್ತ ಕುಟುಂಬ. ಅನ್ನಭಾಗ್ಯ ಯೋಜನೆಯಡಿ ನಾವು ತಿಂಗಳಿಗೆ ಉಚಿತವಾಗಿ 49 ಕೆ.ಜಿ. ಅಕ್ಕಿ ಪಡೆಯುತ್ತಿದ್ದೇವೆ. ಕೂಪನ್ ಪದ್ಧತಿಯನ್ನು ಕೈ ಬಿಡುವ ನಿರ್ಧಾರ ಪ್ರಕಟಿಸಿರುವುದು ಶ್ಲಾಘನೀಯ. ತಾಳೆಎಣ್ಣೆ ವಿತರಣೆಯನ್ನು ಮುಂದುವರಿಸಬೇಕು ಮತ್ತು ಗ್ಯಾಸ್ ಇದ್ದವರಿಗೆ 1 ಲೀ. ಸೀಮೆಎಣ್ಣೆ ನೀಡಬೇಕು ಎಂದರು.

ವಿದ್ಯಾಸಿರಿ ಯೋಜನೆಯ ಪ್ರಯೋಜನ ಪಡೆಯಲು ಕಾನೂನು ಪದವೀಧರರಿಗೆ ಶೇ.50 ಅಂಕ ಪಡೆಯಬೇಕು ಎಂದು ನಿಯಮವನ್ನು ಕೈ ಬಿಡಬೇಕು ಎಂದು ವಿದ್ಯಾರ್ಥಿ ದಕ್ಷಾ ಡಿ.ಜೈನ್ ಆಗ್ರಹಿಸಿದರು. ಆಂಗ್ಲಮಾಧ್ಯಮ ವಿದ್ಯಾರ್ಥಿಗಳಿಗಿಂತ ನಾವೇನೂ ಕಮ್ಮಿ ಇಲ್ಲ ಎಂಬಂತಹ ಭಾವನೆ ನಮ್ಮಲ್ಲಿ ಉಂಟಾಗಿದೆ. ಇದಕ್ಕೆ ಶಿಕ್ಷಣ ಇಲಾಖೆಯಡಿ ವಿವಿಧ ಯೋಜನೆಗಳೇ ಕಾರಣವಾಗಿದೆ. ಶೂ ಜೊತೆಗೆ ನಮಗೆ 2 ಜೊತೆ ಚಪ್ಪಲಿ ನೀಡಬೇಕು, ಹಾಲು ಜೊತೆ ಫ್ಲೇವರ್ ನೀಡಬೇಕು, ಮನೆಯಲ್ಲಿ ಹಾಲು ಕೊಟ್ಟರೂ ಕುಡಿಯದ ನಾವು ಶಾಲೆಯಲ್ಲಿ ಸಿಗುವ ಹಾಲು ಕುಡಿಯುವ ಮೂಲಕ ಪೌಷ್ಠಿಕಾಂಶ ಹೆಚ್ಚಿಸಿಕೊಂಡಿದ್ದೇವೆ ಎಂದು ವಿದ್ಯಾರ್ಥಿನಿಯರಾದ ಪವಿತ್ರಾ, ಪುನಿತಾ, ಅಶ್ವಿತಾ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English