ಶೈಕ್ಷಣಿಕ ಒತ್ತಡದಿಂದ ಹೆಚ್ಚುತ್ತಿರುವ ಮಕ್ಕಳ ನಾಪತ್ತೆ : ಜಿಲ್ಲಾಧಿಕಾರಿ ಕಳವಳ

8:50 PM, Thursday, June 22nd, 2017
Share
1 Star2 Stars3 Stars4 Stars5 Stars
(5 rating, 1 votes)
Loading...

DC ಮಂಗಳೂರು : ಅತಿಯಾದ ಕಲಿಕೆಯ ಒತ್ತಡದಿಂದ ಮಕ್ಕಳು ನಾಪತ್ತೆ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ಕಳವಳ ವ್ಯಕ್ತಪಡಿಸಿದ್ದಾರೆ.

ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2014ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 214 ಮಕ್ಕಳು ನಾಪತ್ತೆಯಾಗಿದ್ದು, ಈ ಪೈಕಿ 200 ಮಕ್ಕಳು ಪತ್ತೆಯಾಗಿದ್ದಾರೆ. ಪತ್ತೆಯಾದ ಮಕ್ಕಳಲ್ಲಿ ನಾಪತ್ತೆಯ ಕಾರಣಗಳನ್ನು ವಿಚಾರಿಸಿದಾಗ ಸುಮಾರು 51 ಮಕ್ಕಳು ಶಾಲೆ ಹಾಗೂ ಪಾಲಕರಿಂದ ಕಲಿಕೆಯ ಒತ್ತಡದಿಂದ ಮನೆ ಬಿಟ್ಟು ಹೋಗಿರುವುದಾಗಿ ತಿಳಿಸಿರುತ್ತಾರೆ.

ಇದೊಂದು ಗಂಭೀರವಾದ ವಿಷಯವಾಗಿದೆ. ಮಕ್ಕಳ ಪ್ರತಿಭೆಗೆ ಪೂರಕವಾಗಿ ಕಲಿಕಾ ವಾತಾವರಣ ಇರಬೇಕು. ಕಲಿಕೆಯ ಹೆಸರಿನಲ್ಲಿ ಅತಿಯಾದ ಒತ್ತಡ ಸಲ್ಲದು. ಬೇರೆ ಮಕ್ಕಳ ಮಾಕ್ರ್ಸ್‍ಗೆ ಪಾಲಕರು ತಮ್ಮ ಮಕ್ಕಳ ಮಾಕ್ರ್ಸ್‍ನ್ನು ಹೋಲಿಕೆ ಮಾಡುವುದು ಉತ್ತಮವಲ್ಲ. ಪಾಲಕರ ಈ ಮನೋಸ್ಥಿತಿ ಬದಲಾಗಬೇಕಿದೆ ಎಂದು ಅವರು ಹೇಳಿದರು.

ಶಿಕ್ಷಣ ಇಲಾಖೆಯು ಶಿಕ್ಷಕರ ಮೂಲಕ ಮಕ್ಕಳ ಮಾನಸಿಕ ಒತ್ತಡ ತಗ್ಗಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಜಿಲ್ಲಾಧಿಕಾರಿಗಳು ಡಿಡಿಪಿಐಗೆ ಸೂಚಿಸಿದರು.

ಜಿಲ್ಲೆಯಲ್ಲಿ ಕೌಟುಂಬಿಕ ಸಮಸ್ಯೆಗಳಿಂದ 57 ಮಕ್ಕಳು, ಒಂಟಿತನದಿಂದ 36 ಹಾಗೂ ಪ್ರೇಮ ಪ್ರಕರಣಗಳಲ್ಲಿ ನಾಪತ್ತೆಯಾಗಿದ್ದರು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಉಸ್ಮಾನ್ ಸಭೆಗೆ ಮಾಹಿತಿ ನೀಡಿದರು.

ಇನ್ನೊಂದು ದತ್ತು ಸಂಸ್ಥೆ:  ಪ್ರಸಕ್ತ ದ.ಕ. ಜಿಲ್ಲೆಯಲ್ಲಿ ಮಕ್ಕಳನ್ನು ದತ್ತು ಪಡೆಯುವ ಏಕೈಕ ಕೇಂದ್ರ ಪುತ್ತೂರಿನಲ್ಲಿದೆ. ಮಂಗಳೂರಿನಲ್ಲಿಯೂ ಮಕ್ಕಳ ದತ್ತು ಕೇಂದ್ರ ತೆರೆಯಲು ಆಸಕ್ತ ಸಂಸ್ಥೆಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಬೇಕು. ಅಲ್ಲಿನ ಮೂಲಸೌಕರ್ಯ ವ್ಯವಸ್ಥೆಗಳನ್ನು ಪರಿಶೀಲಿಸಿ ದತ್ತು ಕೇಂದ್ರ ತೆರೆಯಲು ಅನುಮತಿಸಬೇಕು. ಮಂಗಳೂರಿನಲ್ಲಿ ಎಲ್ಲಾ ವಿಧದ ಮಕ್ಕಳ ವೈದ್ಯಕೀಯ ತಜ್ಞರು ಇರುವುದರಿಂದ ಮಕ್ಕಳ ಆರೋಗ್ಯ ದೃಷ್ಠಿಯಿಂದ ದತ್ತು ಕೇಂದ್ರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಪುತ್ತೂರು ದತ್ತು ಕೇಂದ್ರದಲ್ಲಿ ಇದುವರೆಗೆ 105 ಮಕ್ಕಳನ್ನು ದಾಖಲಿಸಲಾಗಿದ್ದು, ಈ ಪೈಕಿ 65 ಮಕ್ಕಳನ್ನು ದತ್ತು ನೀಡಲಾಗಿದೆ. ಇದುವರೆಗೆ 292 ದಂಪತಿಗಳು ದತ್ತು ಸ್ವೀಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪ್ರಸಕ್ತ 130 ದಂಪತಿ ಕಾಯುವಿಕೆ ಪಟ್ಟಿಯಲ್ಲಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದರು.

ಪುತ್ತೂರು ದತ್ತು ಕೇಂದ್ರದಲ್ಲಿ 2011ರಿಂದ ಇದುವರೆಗೆ 10 ಮಕ್ಕಳು ಸಾವನ್ನಪ್ಪಿರುವುದು ಗಂಭೀರ ವಿಷಯವಾಗಿದ್ದು, ಈ ಬಗ್ಗೆ ಸಂಸ್ಥೆಗೆ ಎಚ್ಚರಿಕೆ ನೀಡಲು ಅವರು ಆದೇಶಿಸಿದರು. ಅನಾಥ ಮಕ್ಕಳನ್ನು ದತ್ತು ಕೇಂದ್ರಕ್ಕೆ ಸೇರಿಸುವ ಮೊದಲು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಡಿ ಪೋಕ್ಸೋ ಕಾಯಿದೆಯಲ್ಲಿ ಜಿಲ್ಲೆಯಲ್ಲಿ 2012ರಿಂದ ಇದುವರೆಗೆ 347 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 308 ಪ್ರಕರಣ ವಿಚಾರಣಾ ಹಂತದಲ್ಲಿದ್ದು, 6 ಕೇಸಿನಲ್ಲಿ ಶಿಕ್ಷೆಯಾಗಿವೆ ಎಂದು ಸಭೆಗೆ ತಿಳಿಸಲಾಯಿತು.

ಎಲ್ಲಾ ಶಾಲೆಗಳಲ್ಲಿ ಮಕ್ಕಳ ಸಲಹಾ ಪೆಟ್ಟಿಗೆ ಅಳವಡಿಸಬೇಕು. ಇದನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮಟ್ಟದ ಅಧಿಕಾರಿ ತೆರೆದು ಪರಿಶೀಲಿಸಬೇಕು. ಬಿಇಓ ಅವರು ಪ್ರತಿ ತಿಂಗಳು ನಡೆಸುವ ಶಾಲಾ ಶಿಕ್ಷಕರ ಸಭೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ನಿಯಮಿತವಾಗಿ ಪರಿಶೀಲಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಜಿಲ್ಲೆಯ ಮಕ್ಕಳ ಪಾಲನಾ ಕೇಂದ್ರ ಅಥವಾ ಅನಾಥಾಲಯಗಳಲ್ಲಿ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿರುವ ನಿಯಮಿತವಾಗಿ ಪರಿಶೀಲಿಸಬೇಕು. ಸೌಲಭ್ಯಗಳಿಲ್ಲದ ಕೇಂದ್ರಗಳಿಗೆ ನೋಟೀಸ್ ಜಾರಿ ಮಾಡುವಂತೆ ಹಾಗೂ ಇದನ್ನು ಪಾಲಿಸದಿದ್ದರೆ ಅವುಗಳನ್ನು ಮುಚ್ಚಲು ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಮದರಸಾಗಳಲ್ಲಿ ಮಕ್ಕಳ ಸಲಹಾ ಪೆಟ್ಟಿಗೆ ತೆರೆಯಲು ಕ್ರಮಕೈಗೊಳ್ಳಲು ಅವರು ವಕ್ಫ್ ಅಧಿಕಾರಿಗೆ ಸೂಚಿಸಿದರು. ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳನ್ನು ನಿಯಮಿತವಾಗಿ ತಪಾಸಣೆ ನಡೆಸಲು ಆರ್‍ಟಿಓ ಅಧಿಕಾರಿಗೆ ಅವರು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನೌಡ, ಜಿ.ಪಂ. ಉಪಕಾರ್ಯದರ್ಶಿ ಎನ್.ಆರ್. ಉಮೇಶ್ ಮತ್ತಿತರರು ಇದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English