ಸಸ್ಪೆನ್ಸ್, ಥ್ರಿಲ್ಲರ್‌ ಸಿನಿಮಾ ‘ನಿಶ್ಯಬ್ದ 2’

3:23 PM, Saturday, November 4th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

nishyabdaಮಂಗಳೂರು: ರಾಕಿಗೆ ಅಪ್ಪನ ಮೇಲೆ ಪ್ರೀತಿ. ಅಪ್ಪನಿಗೆ ಕಿಡ್ನಿ ವೈಫಲ್ಯ. ಚಿಕಿತ್ಸೆ ಕೊಡಿಸಲು ಅವನ ಬಳಿ ದುಡ್ಡಿಲ್ಲ. ಹಣಕ್ಕಾಗಿ ಕಳ್ಳತನಕ್ಕೆ ಇಳಿಯುತ್ತಾನೆ. ಆತನೊಂದಿಗೆ ಕೈಜೋಡಿಸುವ ಪೆಟ್ರೋಲ್ ಪ್ರಸನ್ನನದ್ದೂ ಇದೇ ವೃತ್ತಿ. ಶ್ರದ್ಧಾಳಿಗೆ ಸಾಲಗಾರರ ಕಾಟ. ಮನೆ ಉಳಿಸಿಕೊಳ್ಳಲು ಹೆಣಗಾಡುವ ಆಕೆಗೂ ಹಣ ಬೇಕು. ಹಣ ದೋಚಲು ಹೋಗುವ ಈ ಮೂವರು ಅಚಾನಕ್‌ ಆಗಿ ಮಿಲಿಟರಿಯ ಮಾಜಿ ಅಧಿಕಾರಿಯ ಮನೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ.

ದುಡ್ಡಿನ ಹಿಂದೆ ಬಿದ್ದ ಈ ಮೂವರ ಬದುಕಿನ ತವಕ, ತಲ್ಲಣ ಇಟ್ಟುಕೊಂಡು ‘ನಿಶ್ಯಬ್ದ 2’ ಸಿನಿಮಾ ಕಟ್ಟಿದ್ದಾರೆ ನಿರ್ದೇಶಕ ದೇವರಾಜ್‌ಕುಮಾರ್. ಆದರೆ, ಒಳಿತು– ಕೆಡುಕಿನ ಈ ಸಂಘರ್ಷವನ್ನು ಸಸ್ಪೆನ್ಸ್‌, ಥ್ರಿಲ್ಲರ್‌ ಮೂಲಕ ತೆರೆಯ ಮೇಲೆ ಕಟ್ಟಿಕೊಡುವ ಅವರ ಪ್ರಯತ್ನ ನಿರೀಕ್ಷಿತ ಫಲಕೊಟ್ಟಿಲ್ಲ. ಕಥೆಯಲ್ಲಿ ಭಿನ್ನವಾದ ವಸ್ತು ಆಯ್ದುಕೊಂಡಿದ್ದರೂ ಅದರ ಪ್ರಸ್ತುತಿಯಲ್ಲಿ ಎಡವಿದ್ದಾರೆ.

nishyabdaಜೇಮ್ಸ್‌ ಮಿಲಿಟರಿಯ ಮಾಜಿ ಅಧಿಕಾರಿ. ಕಾರ್ಯಾಚರಣೆಯೊಂದರ ವೇಳೆ ಕಣ್ಣು ಕಳೆದುಕೊಂಡ ಈತನಿಗೆ ಸರ್ಕಾರ ಐದು ಕೋಟಿ ಇನಾಮು ನೀಡಿರುತ್ತದೆ. ಕಣ್ಣು ಕಾಣದಿದ್ದರೂ ಅವನ ಕಿವಿ ಚುರುಕು. ಆದರೆ, ಶಬ್ದವೆಂದರೆ ಅವನಿಗೆ ಅಲರ್ಜಿ. ಜತೆಗೆ, ರಾಟ್‌ ವೀಲರ್‌ ನಾಯಿ ಅವನಿಗೆ ಬೆಂಗಾವಲು. ಅಪ್ಪನನ್ನು ಉಳಿಸಿಕೊಳ್ಳುವುದೇ ರಾಕಿಯ ಏಕೈಕ ಗುರಿ. ಹಾಗಾಗಿ, ಹಣದ ಲೂಟಿಗೆ ಇಳಿಯುವುದು ಅವನಿಗೆ ಅನಿವಾರ್ಯ. ದುಡ್ಡಿನ ಅಗತ್ಯವಿರುವ ಶ್ರದ್ಧಾ ಮತ್ತು ಪೆಟ್ರೋಲ್ ಪ್ರಸನ್ನ ಕೂಡ ಈತನ ಜೊತೆಗೂಡುತ್ತಾರೆ. ಅಧಿಕಾರಿಯ ಮನೆಗೆ ದರೋಡೆಗೆ ಹೋಗುತ್ತಾರೆ. ಮನೆಯಲ್ಲಿ ಸಿಕ್ಕಿಕೊಂಡ ಪೆಟ್ರೋಲ್‌ ಕೊನೆಯುಸಿರೆಳೆಯುತ್ತಾನೆ.

ಹಣವೇ ಈ ಸಿನಿಮಾದ ಕೇಂದ್ರಬಿಂದು. ದುಡ್ಡಿನ ಹಿಂದೆ ಬಿದ್ದವರು ಮಾಡುವ ತಂತ್ರಗಳನ್ನು ಹೇಳುವ ಸಾಕಷ್ಟು ಕಥೆಗಳು ಈಗಾಗಲೇ ಬಂದಿವೆ. ‘ನಿಶ್ಯಬ್ದ 2’ ಈ ಪಟ್ಟಿಗೆ ಮತ್ತೊಂದು ಸೇರ್ಪಡೆ ಅಷ್ಟೇ. ಚಿತ್ರದ ಮೊದಲಾರ್ಧವು ಹಣ ದೋಚಲು ಅಗತ್ಯವಿರುವ ಸಂಚು ರೂಪಿಸುವಲ್ಲಿಯೇ ಮುಗಿದುಹೋಗುತ್ತದೆ. ಚಿತ್ರದ ಕೆಲವು ದೃಶ್ಯಗಳು ಪ್ರೇಕ್ಷಕರ ಸಹನೆಯನ್ನು ಪರೀಕ್ಷಿಸುವಷ್ಟು ದೀರ್ಘವಾಗಿವೆ.

nishyabdaಹಣ ಕದ್ದ ರಾಕಿ ಮತ್ತು ಶ್ರದ್ಧಾ ಜೇಮ್ಸ್‌ನ ಕೈಗೆ ಸಿಕ್ಕಿಬೀಳುತ್ತಾರೆ. ಜೇಮ್ಸ್‌ನಿಂದ ಗುಂಡೇಟು ತಗುಲಿದರೂ ರಾಕಿ ಬದುಕಿ ಮತ್ತೆ ಅಧಿಕಾರಿಯ ಮೇಲೆ ಪ್ರಹಾರ ನಡೆಸುವುದೇ ಅಚ್ಚರಿ. ಶ್ರದ್ಧಾಳದ್ದೂ ಇದೇ ಸ್ಥಿತಿ. ರಾಕಿಯಿಂದ ಏಟು ತಿಂದ ಜೇಮ್ಸ್‌ ಕೊನೆಗೆ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುವುದರೊಂದಿಗೆ ಚಿತ್ರದ ಮುಂದುವರಿದ ಭಾಗ ಬರಲಿದೆ ಎಂದು ನಿರ್ದೇಶಕರು ಸುಳಿವು ನೀಡುತ್ತಾರೆ.

ಅವಿನಾಶ್‌ ಅವರದ್ದು ಅಚ್ಚುಕಟ್ಟಾದ ಅಭಿನಯ. ರೂಪ್‌ ಶೆಟ್ಟಿ ಮತ್ತು ಆರಾಧ್ಯ ಶೆಟ್ಟಿ ಅಭಿನಯದಲ್ಲಿ ಇನ್ನೂ ಪಕ್ವತೆ ಬೇಕಿದೆ. ಕಿಕ್ಕು ಕಿಕ್ಕು… ಹಾಡು ಗುನುಗುವಂತಿದೆ. ಸಸ್ಪೆನ್ಸ್, ಥ್ರಿಲ್ಲರ್‌ ಸಿನಿಮಾ ಇಷ್ಟಪಡುವವರು ನೋಡಬಹುದಾದ ಚಿತ್ರ ‘ನಿಶ್ಯಬ್ದ 2’.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English