ವಿದೇಶಿಯರಿಗೆ ಆಧಾರ್ ಕೊಡದಿರಲು ಸಂಸತ್‌ನಲ್ಲಿ ಧ್ವನಿ ಎತ್ತಲಿ

2:59 PM, Thursday, February 1st, 2018
Share
1 Star2 Stars3 Stars4 Stars5 Stars
(No Ratings Yet)
Loading...

congressಮಂಗಳೂರು: ಆಧಾರ್ ಕಾರ್ಡ್ ಗುರುತಿನ ಚೀಟಿಯೇ ಹೊರತು ಅದು ಪೌರತ್ವ ಕಾರ್ಡ್ ಅಲ್ಲ ಎಂಬುದು 2016ರಲ್ಲಿ ರಚನೆಯಾದ ಆಧಾರ್ ಕಾರ್ಡ್ ಕಾಯ್ದೆಯಲ್ಲಿಯೇ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹಾಗಿದ್ದರೂ ವಿದೇಶಿ ಪ್ರಜೆಗೆ ಆಧಾರ್ ಕಾರ್ಡ್ ನೀಡಿರುವ ಬಗ್ಗೆ ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್‌ರವರು ಕಾನೂನು ವಿರುದ್ಧವಾಗಿ ಮಾತನಾಡಿರುವುದು ಖೇದಕರ. ಈ ಬಗ್ಗೆ ಹೇಳಿಕೆ ನೀಡುವ ಬದಲು ಸಂಸತ್‌ನಲ್ಲಿ ಧ್ವನಿ ಎತ್ತಲಿ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಸಂಸದರಿಗೆ ಸಲಹೆ ನೀಡಿದೆ.

ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ.ಕ. ಜಿಲ್ಲಾ ಕಾಂಗ್ರೆಸ್ ವಕ್ತಾರ, ನ್ಯಾಯವಾದಿ ವಿನಯ್‌ರಾಜ್, ಸಂಸದರನ್ನು ಜನ ಆಯ್ಕೆ ಮಾಡಿರುವುದು ಅವರು ಸಮಸ್ಯೆಗಳನ್ನು ಸಂಸತ್ತಿನಲ್ಲಿ ಚರ್ಚಿಸಲೆಂದು, ಬೀದಿಯಲ್ಲಿ ನಿಂತು ಮಾತನಾಡುವುದಕ್ಕಲ್ಲ ಎಂದು ಆಕ್ಷೇಪಿಸಿದರು.

ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ವಿದೇಶಿ ಪ್ರಜೆಗೆ ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ವರದಿಗೆ ಸಂಬಂಧಿಸಿ ಸಂಸದರು ಆಧಾರ್ ಕಾರ್ಡ್ ನೀಡಲು ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಪ್ರಭಾವ ಬೀರಿದ್ದಾರೆಂದು ಆರೋಪಿಸಿದ್ದಾರೆ. ಇದನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ. ಕಾನೂನು ಪ್ರಕಾರ ಯಾವುದೇ ವ್ಯಕ್ತಿ ಆತ ವಿದೇಶಿಯಾಗಿದ್ದರೂ ಕೂಡಾ ಸೂಕ್ತ ದಾಖಲೆಗಳನ್ನು ಹಾಜರುಪಡಿಸಿದ್ದಲ್ಲಿ ಆಧಾರ್ ಗುರುತಿನ ಚೀಟಿ ಪಡೆಯಲು ಸಾಧ್ಯ. ಈ ಬಗ್ಗೆ ಕೇಂದ್ರ ಸರಕಾರವೇ 2016ರಲ್ಲಿ ಕಾನೂನು ರಚಿಸಿದೆ. ಹಾಗಿರುವಾಗ ತಮ್ಮ ಸರಕಾರವೇ ರಚಿಸಿದ ಕಾನೂನನ್ನು ವಿರೋಧಿಸಿ ಹೇಳಿಕೆ ನೀಡುತ್ತಿರುವ ಸಂಸದರು ಕಾನೂನು ತಜ್ಞರ ಸಲಹೆ ಪಡೆಯುವುದು ಅಗತ್ಯ ಎಂದವರು ಹೇಳಿದರು.

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಬಿಜೆಪಿ ಅಪಪ್ರಚಾರದ ಮೂಲಕ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ತಮ್ಮ ಅಭಿವೃದ್ಧಿಯ ಪ್ರಚಾರದ ಮೂಲಕ ಜನರ ಗಮನ ಸೆಳೆಯುತ್ತಿದೆ. ಮಂಗಳೂರು ನಗರದಲ್ಲಿ ಶಾಸಕ ಜೆ.ಆರ್. ಲೋಬೊ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಅದನ್ನು ಸಹಿಸಲಾಗದೆ ವಿಪಕ್ಷ ಅವರ ವಿರುದ್ಧ ಅಪಪ್ರಚಾರವನ್ನು ನಡೆಸುತ್ತಿದೆ ಎಂದು ವಿನಯರಾಜ್ ಆರೋಪಿಸಿದರು.

ಆಧಾರ್ ಕಾರ್ಡ್, ಅಡುಗೆ ಅನಿಲ ದರ ಏರಿಕೆ, ತೈಲಗಳ ಬೆಲೆ ಏರಿಕೆ, ಆಹಾರ ಧಾನ್ಯಗಳ ಬೆಲೆ ಏರಿಕೆಯನ್ನು ವಿರೋಧಿಸಿ ಅಧಿಕಾರಕ್ಕೆ ಬಂದ ಬಿಜೆಪಿಯ ಆಡಳಿತಾವಧಿಯಲ್ಲಿ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಜಿಎಸ್‌ಟಿ ಜಾರಿಗೊಳಿಸಲಾಗಿದೆ. ತೈಲಗಳ ಬೆಲೆ ಏರಿಕೆಯಾಗುತ್ತಿದೆ, ಆಹಾರ ಧಾನ್ಯಗಳ ಬೆಲೆ ದಿನನಿತ್ಯ ಏರಿಕೆಯಾಗುತ್ತಿದೆ. ಆದರೆ ಕಾಂಗ್ರೆಸ್ ಸರಕಾರ ನೀಡಿದ ಭರವಸೆಯನ್ನು ಈಡೇರಿಸುವ ಮೂಲಕ ಜನಪರವಾಗಿ ಕೆಲಸ ಮಾಡುತ್ತಿದೆ ಎಂದು ವಿನಯ್‌ರಾಜ್ ಹೇಳಿದರು.

ಬಿಜೆಪಿಯ ಜಿಲ್ಲಾಧ್ಯಕ್ಷರು ಇತ್ತೀಚೆಗೆ ಅಕ್ರಮ ನಡೆಯುತ್ತಿರುವುದಾಗಿ ಹೇಳಿಕೆ ನೀಡಿದ್ದು, ಯಾವ ರೀತಿಯ ಅಕ್ರಮ ಎಂಬುದನ್ನು ಸಮಾಜಕ್ಕೆ ಅವರು ತಿಳಿಸಬೇಕು ಎಂದು ಸವಾಲು ಹಾಕಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ಯು.ಎಚ್. ಖಾಲಿದ್, ನೀರಜ್ ಚಂದ್ರಪಾಲ್, ಆರಿಫ್ ಬಾವಾ, ಶೋಭಾ ಪಡೀಲ್, ಪ್ರೇಮ್ ಕುಮಾರ್, ಗೀತಾ, ನಝೀರ್ ಬಜಾಲ್ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English