- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಚುನಾವಣಾ ರಣತಂತ್ರ… ಸಿದ್ದರಾಮಯ್ಯ ತವರಲ್ಲಿ ಮೋದಿ ಯಾತ್ರೆಗೆ ಸಜ್ಜು

narendra-modi [1]ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಫೆ.19ರಂದು ಪ್ರಧಾನಿ ನರೇಂದ್ರ ಮೋದಿ ದಿನವಿಡೀ ಕಾಯ೯ಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮೈಸೂರು ಭಾಗದಲ್ಲಿ ರಣತಂತ್ರ ರೂಪಿಸಲು ಸಜ್ಜಾಗಿದ್ದಾರೆ.

ಅಂದು ಬೆಳಿಗ್ಗೆ ಮೊದಲಿಗೆ ನಗರದ ರೈಲ್ವೆ ನಿಲ್ದಾಣಕ್ಕೆ ಆಗಮಿಸಲಿರುವ ಅವರು ಜೋಡಿ ಹಳಿಗಳನ್ನು ಉದ್ಘಾಟಿಸಲಿದ್ದಾರೆ. ನಂತರ ಮೈಸೂರಿಂದ ಉತ್ತರ ಕರ್ನಾಟಕಕ್ಕೆ ನೇರ ಸಂಪರ್ಕ ಕಲ್ಪಿಸುವ ಹಾಗೂ ಸಂಚಾರಕ್ಕೆ ನೆರವಾಗುವಂತ ರೈಲಿಗೆ ಚಾಲನೆ ನೀಡಲಿದ್ದಾರೆ.

ಆ ನಂತರ ಕೆ.ಆರ್.ಎಸ್ ರಸ್ತೆಯಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಇಎಸ್‍ಐ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ಬಳಿಕ ಸುಮಾರು ಆರುವರೆ ಸಾವಿರ ಕೋಟಿ ರೂ. ವೆಚ್ಚದ ಮೈಸೂರು-ಬೆಂಗಳೂರು ನಡುವಿನ ೮ ಲೈನ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಅದೇ ದಿನ ಸಂಜೆ 4 ಗಂಟೆಗೆ ಮಹಾರಾಜ ಕಾಲೇಜಿನ ಮೈದಾನದಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಸಿದ್ದರಾಮಯ್ಯ ನೇತೃತ್ವದ ಸಕಾ೯ರ ವಿರುದ್ಧ ಗುಡುಗುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲಿ ನಡೆದ ಪರಿವತ೯ನಾ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ನಂತರ ಟ್ವಿಟ್ಟರ್‌ ವಾರ್ ಶುರುವಾಗಿತ್ತು.

ಈಗ ಪ್ರಧಾನಿಯಾದ ಬಳಿಕ ಮೈಸೂರು ವಿಶ್ವವಿದ್ಯಾನಿಲಯ ಶತಮಾನೋತ್ಸವ ಸಂಭ್ರಮ‌ ಹಾಗೂ ವಿಜ್ಞಾನ ಸಮ್ಮೇಳನ ಉದ್ಘಾಟಿಸಿ ತೆರಳಿದ ಬಳಿಕ ಎರಡನೇ ಬಾರಿಗೆ ಸಾಂಸ್ಕೃತಿಕ ನಗರಿಗೆ ಆಗಮಿಸುತ್ತಿರುವುದರಿಂದ ಬಿಜೆಪಿ ಪಾಳಯದಲ್ಲಿ ಹುಮ್ಮಸ್ಸು ಇಮ್ಮಡಿಗೊಂಡಿದೆ.