ಸಿಎಂ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಬಾರದು: ಬಿಎಸ್‌ವೈ

5:27 PM, Thursday, February 15th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

yedeyorappaಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಮಂಡಿಸಲಿರುವ ಬಜೆಟ್‌ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಚುನಾವಣಾ ಸನಿಹದಲ್ಲಿ ಅವರು ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸೇವಾಲಾಲ್ ಜಯಂತಿ ಆಚರಣೆ ಮಾಡಲಾಯಿತು. ಜಯಂತಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ನಂತರ ಅನ್ವರ್ ಮಾನ್ಪಾಡಿ ವರದಿ ಬಹಿರಂಗ ಪಡಿಸಲು ಬಿಜೆಪಿ ರೂಪಿಸಿರುವ ಪ್ರತ್ಯೇಕ ವೆಬ್ ಸೈಟ್‌ಗೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು. ರಾಜ್ಯಾದ್ಯಂತ ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ವರದಿ ಸಲ್ಲಿಸಿದ್ದ ಅನ್ವರ್ ಮಾನ್ಪಾಡಿ ವರದಿ ಮಾಹಿತಿ ಈ ವೆಬ್ ಸೈಟ್‌ನಲ್ಲಿ ಇದೆ ಎಂದು ಬಿಜೆಪಿ ನಾಯಕರು ಪ್ರಕಟಿಸಿದರು.

ನಂತರ ಮಾತನಾಡಿದ ಯಡಿಯೂರಪ್ಪ, ಸಿದ್ದರಾಮಯ್ಯ ವಿಚಾರ ಮಾಡಿ ಬಜೆಟ್ ಮಂಡನೆ ಮಾಡಬೇಕು. ಇಲ್ಲ ಸಲ್ಲದ ಭಾಗ್ಯಗಳನ್ನು ಘೋಷಣೆ ಮಾಡಬಾರದು. ಮೇ ತಿಂಗಳ ಮೊದಲ ವಾರದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ಮಾರ್ಚ್ 15 ಕ್ಕೆ ಚುನಾವಣಾ ನೀತಿ ಸಂಹಿತೆ ಹೊರ ಬರಲಿದೆ. ಹಾಗಾಗಿ ಸಿಎಂ ಪೂರ್ತಿ ಬಜೆಟ್ ಮಂಡನೆ ಮಾಡಬಾರದು. ಮಾಡಿದರೂ ಮುಂದೆ ನಮ್ಮ ಸರ್ಕಾರ ಬಂದ ಮೇಲೆ ಹೊಸ ಬಜೆಟ್ ಮಂಡನೆ ಮಾಡುತ್ತೇವೆ ಎಂದರು.

ಬಹಮನಿ ಸುಲ್ತಾನರ ಉತ್ಸವ ಮಾಡುವ ಸರ್ಕಾರದ ನಿರ್ಧಾರಕ್ಕೆ ಯಡಿಯೂರಪ್ಪ ಕಿಡಿಕಾರಿದರು. ಸರ್ಕಾರದ ಈ ಉತ್ಸವ ಆಚರಣೆಗೆ ನಮ್ಮ ಸಂಪೂರ್ಣ ವಿರೋಧ ಇದೆ. ಟಿಪ್ಪು ಜಯಂತಿಗಿಂತ 100 ಪಟ್ಟು ಪರಿಣಾಮವನ್ನು ಸರ್ಕಾರ ಎದುರಿಸಬೇಕಾಗಲಿದೆ. ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ಸಿದ್ಧತೆ ನಡೆಸಿದೆ ಎಂದು ಎಚ್ಚರಿಕೆ ನೀಡಿದರು.

ಟಿಪ್ಪು ಜಯಂತಿ ವಿರೋಧಿಸಿದರೂ ಆಚರಣೆ ಮಾಡಿದಿರಿ. ಇದೀಗ ಜನರ ವಿರೋಧದ ನಡುವೆ ಬಹುಮನಿ ಉತ್ಸವಕ್ಕೆ ಮುಂದಾಗಿದ್ದೀರಿ. ತಕ್ಷಣ ಬಹಮನಿ ಉತ್ಸವ ಆಚರಣೆ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು.ಇಲ್ಲದೆ ಹೋದರೆ ಚುನಾವಣೆ ವೇಳೆ ಜನ ಬುದ್ಧಿ ಕಲಿಸಲಿದ್ದಾರೆ ಎಂದರು.

ಸಮಾರಂಭದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂದಾಗ, ಶೋಭಾ ಕರಂದ್ಲಾಜೆ ಮೊದಲ ಮಹಿಳಾ ಮುಖ್ಯಮಂತ್ರಿ ಆಗಲಿ ಎಂದು ಕಾರ್ಯಕ್ರಮ ನಿರೂಪಕಿ ಹೇಳಿದರು. ಯಡಿಯೂರಪ್ಪನವರೇ ನೀವು ಆಶಿರ್ವಾದ ಮಾಡಬೇಕು ಎಂದು ನಿರೂಪಕಿ ಮನವಿ ಮಾಡಿದರು. ಇದಕ್ಕೆ ಯಡಿಯೂರಪ್ಪ ನಗು ಮುಖದಲ್ಲೇ ತಲೆದೂಗಿದರು. ಬಳಿಕ ಮಾತು ಆರಂಭಕ್ಕೂ ಮುನ್ನ ಪಕ್ಕದಲ್ಲಿ ಶೋಭಾ ಕರಂದ್ಲಾಜೆ ಅವರನ್ನು ಕೂರಿಸಿಕೊಂಡು ತಪ್ಪು ಮಾಡಿದೆ ಎಂದು ನಗೆ ಚಟಾಕಿ ಹಾರಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English