ಬಿಜೆಪಿ ರಾಷ್ಟ್ರಾಧ್ಯಕ್ಷರ ರಾಜ್ಯ ಪ್ರವಾಸ: ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿದ ಶಾ

10:16 AM, Tuesday, February 20th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

amit-shahಮಂಗಳೂರು: ರಾಜ್ಯದಲ್ಲಿ ಚುನಾವಣಾ ಪೂರ್ವ ಸಿದ್ಧತೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮೂರು ದಿನಗಳ ಕರಾವಳಿ ಪ್ರವಾಸ ಆರಂಭಗೊಂಡಿದೆ.

ಎರಡು ತಾಸು ವಿಳಂಬವಾಗಿ ಇಂದು ಸಂಜೆ ಸುಮಾರು 7.45ರ ವೇಳೆಗೆ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಅಮಿತ್ ಶಾ ಆಗಮಿಸಿದರು. ಶಾ ಅವರಿಗೆ ವಿಮಾನ ನಿಲ್ದಾಣದ ಕೆಂಜಾರಿನಲ್ಲಿ ಬಿಜೆಪಿ ಕಾರ್ಯಕರ್ತರು ಅಭೂತಪೂರ್ವ ಸ್ವಾಗತ ನೀಡಿ ಬರಮಾಡಿಕೊಂಡರು.

ಸೇರಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರತ್ತ ಶಾ ಕೈ ಬೀಸಿ ಕುಕ್ಕೆ ಸುಬ್ರಹ್ಮಣ್ಯದತ್ತ ನಿರ್ಗಮಿಸಿದರು. ಈ ಸಂದರ್ಭ ಶಾ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ವಿಳಂಬ ಮತ್ತು ಅನಾರೋಗ್ಯದಿಂದ ಮಾತನಾಡುವುದಿಲ್ಲ ಎಂದು ಕಾರ್ಯಕ್ರಮ ನಿರೂಪಕರು ತಿಳಿಸಿದರು.

ವಿಮಾನ ನಿಲ್ದಾಣದಲ್ಲಿ ಶಾ ಅವರನ್ನು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಈಶ್ವರ ಕಟೀಲು, ಮಾಜಿ ಸಚಿವ ಕೃಷ್ಣ ಪಾಲೆಮಾರ್ ಮೊದಲಾದವರು ಬರಮಾಡಿಕೊಂಡರು.

ರಾತ್ರಿ ಕುಕ್ಕೆಯಲ್ಲಿ ಪ್ರಮುಖರ ಜತೆ ಮಾತುಕತೆ ನಡೆಸುವ ಅಮಿತ್‌‌ ಶಾ ಅಲ್ಲಿಯೇ ತಂಗಲಿದ್ದಾರೆ. ನಾಳೆ ಸುಬ್ರಹ್ಮಣ್ಯ ದೇವರ ದರ್ಶನ ಮಾಡಿ, ಸ್ವಾಮೀಜಿ ಜತೆ ಮಾತುಕತೆ ನಡೆಸುವರು. ಬಳಿಕ ಸಮೀಪದ ಕುಲ್ಕುಂದದಲ್ಲಿ ನಡೆಯುವ ನವಶಕ್ತಿ ಸಮಾವೇಶದಲ್ಲಿ ಭಾಗವಹಿಸುವರು. ನಂತರ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವರು. ಮಧ್ಯಾಹ್ನ ಸುಮಾರು 12.30ರ ವೇಳೆಗೆ ಬಂಟ್ವಾಳದಲ್ಲಿ ನಡೆಯುವ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸುವರು.

ಈ ಸಮಾವೇಶದ ಬಳಿಕ ಸುರತ್ಕಲ್‌ಗೆ ತೆರಳಿ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಮನೆಗೆ ಭೇಟಿ ನೀಡಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಉಡುಪಿಗೆ ನಿರ್ಗಮಿಸುವರು. ನಂತರ ಉಡುಪಿಯ ಮಲ್ಪೆಯಲ್ಲಿ ನಡೆಯುವ ಮೀನುಗಾರರ ಸಮಾವೇಶದಲ್ಲಿ ಭಾಗವಹಿಸಿ, ಫೆ. 21ರಂದು ಉತ್ತರ ಕನ್ನಡ ಜಿಲ್ಲೆಗೆ ತೆರಳಲಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English