ಸಿಎಂ ಓಲೈಕೆ ರಾಜಕಾರಣ ಯಶಸ್ವಿಯಾಗದು: ಅಮಿತ್ ಶಾ

12:27 PM, Tuesday, February 20th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

speechಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಓಲೈಕೆ ರಾಜಕಾರಣ ಯಶಸ್ವಿಯಾಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಪಕ್ಕದ ಕುಲ್ಕುಂದದಲ್ಲಿ ನವಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಮತ್ತು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ಓಲೈಕೆ ರಾಜಕಾರಣ ಯಶಸ್ವಿಯಾಗುತ್ತದೆ ಎಂದು ಸಿದ್ದರಾಮಯ್ಯ ಅಂದುಕೊಂಡಿದ್ದರೆ ಅದು ಅವರ ತಪ್ಪು ಭಾವನೆ ಅಷ್ಟೆ.

ಅವರ ಓಲೈಕೆ ಮತ್ತು ಧ್ರುವೀಕರಣ ರಾಜಕಾರಣವನ್ನು ಎನ್.ಎ.ಹ್ಯಾರಿಸ್ ಮಗನ ಪ್ರಕರಣದಲ್ಲಿ ಗಮನಿಸಬಹುದು. ಎಮ್ಎಲ್ಎ ಮಗನೊಬ್ಬ ಓರ್ವನ ಮೇಲೆ ಹಲ್ಲೆ ಮಾಡಿದರೂ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಯಾಕೆ?” ಎಂದು ಪ್ರಶ್ನಿಸಿದರ ಅವರು, “ಹಾರಿಸ್ ಮಗ ಎಂಬ ಕಾರಣಕ್ಕೆ ಮಾತ್ರವಲ್ಲ ಒಂದು ಸಮುದಾಯವನ್ನು ಓಲೈಕೆ ಮಾಡಲು ಅವರು ಹೀಗೆ ಮಾಡಿದ್ದಾರೆ,” ಎಂದು ಅಮಿತ್ ಶಾ ಸುಳ್ಳು ಬೆರೆಸಿ ಕಿಡಿಕಾರಿದ್ದಾರೆ.

ಖಂಡಿತವಾಗಿಯೂ ಜಯ ನಮ್ಮದೇ ಸುಬ್ರಹ್ಮಣ್ಯ ಕ್ಷೇತ್ರದಿಂದ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದ್ದೇನೆ ಖಂಡಿತವಾಗಲೂ ಈ‌ಬಾರಿ ಜಯ ನಮ್ಮದೇ ಆಗುತ್ತದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು. ಬೂತ್ ಮಟ್ಟದಲ್ಲಿ ಪಕ್ಷ ಗೆಲ್ಲಬೇಕು . ಬೂತ್ ಮಟ್ಟದಲ್ಲಿ ಪಕ್ಷ ಗೆದ್ದರೆ ವಿಧಾನಸಭಾ ಚುನಾವಣೆ ಸುಲಭವಾಗಿ ಗೆಲ್ಲುತ್ತೇವೆ. ಈ ಹಿನ್ನೆಲೆಯಲ್ಲಿ ಪಕ್ಷ ಬಲ ಪಡಿಸಬೇಕಾಗಿದೆ ಎಂದು ಕಾರ್ಯಕರ್ತರಿಗೆ ಹೇಳಿದರು.

ಸಿದ್ದರಾಮಯ್ಯಗೆ ಶಾ ಪ್ರಶ್ನೆ “ಸಿಎಂ ಸಿದ್ದರಾಮಯ್ಯನವರು ಮೋದಿಗೆ ಪ್ರಶ್ನೆ ಮಾಡ್ತಾರೆ. ಮೋದಿ ಅವರು ಏನು ಸಾಧನೆ ಮಾಡಿದ್ದಾರೆ ಅಂತಾ ಪ್ರಶ್ನೆ ಮಾಡ್ತಾರೆ. ಆದರೆ ನಾನು ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಮಾಡುತ್ತೇನೆ. 5 ವರ್ಷದಲ್ಲಿ ನೀವೇನು ಸಾಧನೆ ಮಾಡಿದ್ದಿರಿ? ನೀವು ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ, ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದೆ. ನಿಮ್ಮ ದುರಾಡಳಿತದ ವಿರುದ್ದ ಜನ ಈ ಬಾರಿ ಹೋರಾಡುತ್ತಾರೆ. ರಾಜ್ಯದಲ್ಲಿ ಕಮಲವನ್ನು ಅರಳಿಸುತ್ತಾರೆ,” ಎಂದು ಶಾ ಹೇಳಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕ ರಾಜ್ಯಕ್ಕೆ 18ಸಾವಿರ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಈ ಅನುದಾನವನ್ನು ಏನು ಮಾಡಿದ್ರಿ ಸಿದ್ದರಾಮಯ್ಯನವರೇ? ದೀನ ದಲಿತರಿಗೆ ಕೊಟ್ಟಿದ್ದೀರಾ? ಬಡವರಿಗೆ ಕೊಟ್ಟಿದ್ದೀರಾ? ಯಾರಿಗೆ ಅನುದಾನದ ಹಣವನ್ನು ನೀಡಿದ್ದೀರಿ?” ಎಂದು ಪ್ರಶ್ನಿಸಿದ ಅಮಿತ್ ಶಾ, “ಕೇಂದ್ರದಿಂದ ಬಂದ ಅನುದಾನದ ಹಣ ನಿಮ್ಮ ಸಂಪುಟದ ಸಹೋದ್ಯೋಗಿಗಳ ಕಿಸೆ ಸೇರಿದೆ,” ಎಂದು ಆರೋಪಿಸಿದರು .

11 ಕೋಟಿ ಕಾರ್ಯಕರ್ತರಿದ್ದಾರೆ ಬಿಜೆಪಿ ಭಿನ್ನ ಸಂಸ್ಕೃತಿ ಇರುವ ಪಕ್ಷ. ಬೇರೆ ಪಕ್ಷಗಳು ವಿವಿಧ ಮಂತ್ರಿಗಳು ಮತ್ತು ಅವರ ಕೆಲಸದ ಆಧಾರದ ಮೇಲೆ ಚುನಾವಣೆಗೆ ಹೋಗುತ್ತವೆ. ಆದರೆ ನಾವು ಹಾಗಲ್ಲ. ನಮ್ಮ ಬಳಿ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಮಾತ್ರವಲ್ಲ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 11 ಕೋಟಿ ಸದಸ್ಯರಿದ್ದಾರೆ,” ಅಮಿತ್ ಶಾ ತಮ್ಮ ಕಾರ್ಯಕರ್ತರ ಶಕ್ತಿಯ ಬಗ್ಗೆ ವಿವರಿಸಿದರು.

ದೇಶದ ಹಿತಾಸಕ್ತಿಯ ಚುನಾವಣೆ “ಇದು (ಕರ್ನಾಟಕ ವಿಧಾನಸಭೆ ಚುನಾವಣೆ 2018) ರಾಜ್ಯಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ. ಇದು ಇಡೀ ದೇಶದ ಹಿತಾಸಕ್ತಿಯ ಚುನಾವಣೆ. ಈ ಚುನಾವಣೆಯ ಮೂಲಕ ಕರ್ನಾಟಕದಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬರಲಿದೆ ಮತ್ತು ದಕ್ಷಿಣದಲ್ಲಿ ನಮಗೆ (ಬಿಜೆಪಿಗೆ) ಬಾಗಿಲು ತೆರೆದುಕೊಳ್ಳಲಿದೆ,” ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿಶ್ಲೇಷಿಸಿದರು. ಮಹಾರಾಷ್ಟ್ರ, ಹರಿಯಾಣ, ಜಾರ್ಖಾಂಡ್, ಕಾಶ್ಮೀರ, ಅಸ್ಸಾಂ, ಮಣಿಪುರ, ಗೋವಾ ಗುಜರಾತ್, ಉತ್ತರಖಾಂಡ್, ಉತ್ತರ ಪ್ರದೇಶ, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ‌ ಅಧಿಕಾರಕ್ಕೆ ಬಂದಿದೆ.

ಅದೇ ರೀತಿ ಕರ್ನಾಟಕದಲ್ಲೂ ಕಾಂಗ್ರೆಸ್ ಹೋಗಿ ಕಮಲ ಅರಳಬೇಕಾಗಿದೆ ಎಂದು ಶಾ ತಿಳಿಸಿದರು. ಕರ್ನಾಟಕದ ಮೊದಲ ನವಶಕ್ತಿ ಸಮಾವೇಶ ಕುಲ್ಕುಂದಲ್ಲಿ ನಡೆದ ನವಶಕ್ತಿ ಸಮಾವೇಶ ಕರ್ನಾಟಕದ ಮೊದಲ ನವಶಕ್ತಿ ಸಮಾವೇಶವಾಗಿದೆ. ಪ್ರತಿ ಬೂತ್ ಗೆ 9 ಮಂದಿಯಂತೆ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. “ಈ ಕಾರ್ಯಕರ್ತರಿಗೆ ಚುನಾವಣೆಯನ್ನು ಗೆಲ್ಲಿಸುವ ತಾಕತ್ತು ಇದೆ. ಪ್ರತಿ ಬೂತ್ ನ ಒಂಭತ್ತು ನವರತ್ನಗಳು ಬಂದಿದ್ದಾರೆ. ಇವರಿಂದಾಗಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ವಿರೋಧಿಗಳು ಇಲ್ಲ ಎಂಬಂತಾಗಿದೆ,” ಎಂದು ಶಾ ಬಣ್ಣಿಸಿದರು.

ಸುಬ್ರಹ್ಮಣ್ಯ ದರ್ಶನ ಪಡೆದ ಶಾ ಇದಕ್ಕೂ ಮೊದಲು ನಾಗಾರಾಧನೆಯ ಪ್ರಸಿದ್ದ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬಿಜೆಪಿ ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಿದರು. ನಿನ್ನೆ ಜ್ವರದಿಂದ ಬಳಲುತ್ತಿದ್ದ ಅಮಿತ್ ಶಾ ಅವರಿಗೆ ಸುಬ್ರಹ್ಮಣ್ಯದಲ್ಲಿಯೇ ತಜ್ಞ ವೈದ್ಯರು ಚಿಕಿತ್ಸೆ ನೀಡಿದ್ದರು. ಇಂದು ಜ್ವರದಿಂದ ಚೇತರಿಸಿ ಕೊಂಡ ಅಮಿತ್ ಶಾ ಮುಂಜಾನೆ ಸುಬ್ರಹ್ಮಣ್ಯ ದೇವಾಲಯಕ್ಕೆ 45 ನಿಮಿಷ ತಡವಾಗಿ ಭೇಟಿ ನೀಡಿದರು. ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ಶಾ ಅವರ ಹೆಸರಿನಲ್ಲಿ ಅರ್ಚಕರು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಅರ್ಚನೆ ಸಲ್ಲಿಸಿದರು.

ವಿದ್ಯಾಪ್ರಸನ್ನ ಶ್ರೀಗಳ ಆಶೀರ್ವಾದ ಪಡೆದ ಶಾ ಇದೇ ವೇಳೆ ಸುಬ್ರಹ್ಮಣ್ಯ ಮಠಕ್ಕೆ ತೆರಳಿದ ಅಮಿತ್ ಶಾ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಶ್ರೀಗಳೊಂದಿಗೆ ಕೆಲಕಾಲ ಮಾತುಕತೆ ನಡೆಸಿದ ಅಮಿತ್ ಶಾ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದಾದಲ್ಲಿ ಆಯೋಜಿಸಲಾಗಿರುವ ನವಶಕ್ತಿ ಸಮಾವೇಶದಲ್ಲಿ ಭಾಗವಹಿಸಲು ತೆರಳಿದರು. ನಿನ್ನೆ ಜ್ವರದಿಂದ ಬಳಲಿದ ಅಮಿತ್ ಶಾ ಅವರಿಗೆ ಎಂದು ಕಾರ್ಯಕ್ರಮಗಳಲ್ಲಿ ಕುಳಿತು ಮಾತನಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಮೊಣಕಾಲು ನೋವಿನಿಂದ ಬಳಲುತ್ತಿರುವ ಶಾ ಅವರಿಗೆ ನಿಂತಿಕಲ್ ಆಯುರ್ವೇದ ಪಂಚಕರ್ಮ ಸೆಂಟರ್ ನ ರಾಜಶೇಖರ್ ಮುಂಜಾನೆ ಮಸಾಜ್ ಚಿಕಿತ್ಸೆ ನೀಡಿದ್ದಾರೆ. ಆದರೆ ವೈದ್ಯರ ಸಲಹೆ ಹೊರತಾಗಿಯೂ ಶಾ ನವಶಕ್ತಿ ಸಂಗಮದಲ್ಲಿ ನಿಂತೇ ಭಾಷಣ ಮಾಡಿದರು. ದಿನದ ಕಾರ್ಯಕ್ರಮಗಳು ಇದಾದ ಬಳಿಕ ಬೆಳಗ್ಗೆ 11 ಗಂಟೆಗೆ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜತೆ ಅಮಿತ್ ಸಂವಾದ ನಡೆಸಲಿದ್ದಾರೆ.

ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳದಲ್ಲಿ ನವಶಕ್ತಿ ಸಂಗಮ ನಡೆಯಲಿದ್ದು ಅದರಲ್ಲೂ ಭಾಗವಹಿಸಲಿದ್ದಾರೆ. ಕುಲ್ಕುಂದ ಮತ್ತು ಬಂಟ್ವಾಳದಲ್ಲಿ ನಡೆಯಲಿರುವ ನವಶಕ್ತಿ ಸಂಗಮದಲ್ಲಿ ಸೀಮಿತ ಕಾರ್ಯಕರ್ತರನ್ನು ಹೊರತುಪಡಿಸಿ ಉಳಿದವರಿಗೆ ಪಾಲ್ಗೊಳ್ಳುವ ಅವಕಾಶ ಇಲ್ಲ. ತಮ್ಮ ಪ್ರವಾಸದ ಸಂದರ್ಭದಲ್ಲಿ ಇತ್ತೀಚಿಗೆ ದುಷ್ಕರ್ಮಿಗಳ ದಾಳಿಗೆ ಬಲಿಯಾದ ಬಿಜೆಪಿ ಕಾರ್ಯಕರ್ತ ಕಾಟಿಪಳ್ಳದ ದೀಪಕ್ ರಾವ್ ಮನೆಗೆ ಅಮಿತ್ ಶಾ ಭೇಟಿ ನೀಡಲಿದ್ದಾರೆ. ನಂತರ ಅಲ್ಲಿಂದ ಉಡುಪಿಗೆ ಪ್ರಯಾಣ ಬೆಳೆಸಲಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English