ಜಾಣಮೌನದ ಹಿಂದಿದೆ ಸರಳ ರಹಸ್ಯ

3:26 PM, Wednesday, February 21st, 2018
Share
1 Star2 Stars3 Stars4 Stars5 Stars
(5 rating, 1 votes)
Loading...

mangaluruಮಂಗಳೂರು: ಅನೈತಿಕ ಪೊಲೀಸ್‌ಗಿರಿಯ ಘಟನೆಗಳಿಂದಾಗಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ದೇಶದಾದ್ಯಂತ ಆಗಾಗ ಸುದ್ದಿ ಮಾಡಿದರೂ, ಅನೈತಿಕ ಪೊಲೀಸ್‌ಗಿರಿಯು ಚುನಾವಣೆಯ ವಿಷಯವಾಗಿ ಗುರುತಿಸಿಕೊಳ್ಳದೇ ಇರುವುದು ವಿಪರ್ಯಾಸ.

ಅಭಿವೃದ್ಧಿಯ ಸಮಸ್ಯೆಗಳು, ನಿರುದ್ಯೋಗದ ಪರಿಣಾಮವಾದ ನಿರಂತರ ವಲಸೆ ಅಥವಾ ನೀರು ನಿರ್ವಹಣೆಯ ಸ್ಥಳೀಯ ಸಮಸ್ಯೆಗಳು ಕರಾವಳಿಯಲ್ಲಿ ಚುನಾವಣೆಯ ವಿಷಯವಾಗುತ್ತಿಲ್ಲ. ಇದೇ ಸಾಲಿಗೆ ಅನೈತಿಕ ಪೊಲೀಸ್‌ಗಿರಿಯೂ ಸೇರಿದೆ ಎನ್ನಬಹುದು. ಜಿಲ್ಲೆಯಲ್ಲಿ ಶಿಕ್ಷಣ ಪಡೆದ ಜನರೇ ಇರುವುದರಿಂದ ರಾಜ್ಯ ರಾಜಕೀಯ ವಿದ್ಯಮಾನ ಮತ್ತು ದೇಶದ ರಾಜಕೀಯ ಚಿತ್ರಣವೂ ಇಲ್ಲಿನ ಮತದಾರರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.

ಹಿಂದೂ ಹುಡುಗಿಯರು ಮುಸ್ಲಿಂ ಹುಡುಗರೊಂದಿಗೆ ಸಲುಗೆಯಿಂದ ಇದ್ದರೆ ಹಿಂದೂ ಕೋಮುವಾದಿ ಸಂಘಟನೆಗಳು, ಮುಸ್ಲಿಂ ಹುಡುಗಿ ಹಿಂದು ಹುಡುಗರೊಂದಿಗೆ ಸಲುಗೆಯಿಂದ ಇದ್ದರೆ ಮುಸ್ಲಿಂ ಕೋಮುವಾದಿ ಸಂಘಟನೆಗಳು ಅವರನ್ನು ಬೆದರಿಸುವ ಘಟನೆಗಳು ನಡೆದಿವೆ. ಆದರೆ, ಇವು ಮಾಧ್ಯಮಗಳಿಗೆ ವಸ್ತುವಾದಷ್ಟು ಇಲ್ಲಿನ ಜನರನ್ನು ಅದು ಕಾಡಿಲ್ಲವೇ ಎಂದು ಪ್ರಶ್ನಿಸಿದರೆ ಕಾಲೇಜು ವಿದ್ಯಾರ್ಥಿಗಳು ಹಿರಿಯರ ರಾಜಕಾರಣವನ್ನು ದೂರುತ್ತಾರೆ.

‘ಅನೈತಿಕ ಪೊಲೀಸ್‌ಗಿರಿ ಈಗಷ್ಟೇ ಕಾಲೇಜು ಮೆಟ್ಟಿಲೇರಿದ ವಿದ್ಯಾರ್ಥಿಗಳ ವಿಷಯವಾದ್ದರಿಂದ ರಾಜಕೀಯದಲ್ಲಿ ಇರುವವರಿಗೆ ಇದು ಆಕರ್ಷಕ ಆಗಿಲ್ಲವೇನೋ’ ಎಂದು ಆಗ್ನೆಸ್‌ ಕಾಲೇಜಿನ ಪತ್ರಿಕೋದ್ಯಮದ ಪ್ರಥಮ ವರ್ಷದ ವಿದ್ಯಾರ್ಥಿನಿ ಸುಷ್ಮಾಶೆಟ್ಟಿ ಹೇಳುತ್ತಾರೆ. ಈಕೆಯ ಮಾತನ್ನು ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್‌ ಸಮರ್ಥಿಸುತ್ತಾರೆ.

‘ಪೋಷಕರಿಗೆ ಅಂತರಂಗದಲ್ಲಿ ಇದು ಇಷ್ಟವೇ ಆಗುತ್ತದೆ. ಕಾಲೇಜಿಗೆ ಹೋಗುವ ತಮ್ಮ ಮಕ್ಕಳು ಪ್ರೀತಿ ಪ್ರೇಮ ಅಂತ ಹಚ್ಚಿಕೊಳ್ಳುವುದು ಯಾವ ಪೋಷಕರಿಗೆ ತಾನೇ ಬೇಕಾಗಿದೆ. ಇಂತಹುದೊಂದು ಭಯ ಇದ್ದರೆ ಒಳ್ಳೆಯದೇ ಆಯಿತು ಎಂಬ ಧೋರಣೆ ಪಾಲಕರಲ್ಲಿ ಇದೆ ಎನ್ನುತ್ತಾರೆ ಅವರು.

ಮುಸ್ಲಿಂ ಕೋಮು ಸಂಘಟನೆ ಮತ್ತು ಹಿಂದೂ ಕೋಮು ಸಂಘಟನೆಗಳು ಇದರಲ್ಲಿ ತೊಡಗಿಸಿಕೊಂಡಿರುವುದರಿಂದ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಈ ಬಗ್ಗೆ ಜಾಣಕುರುಡು ಪ್ರದರ್ಶಿಸುತ್ತಾರೆ ಎನ್ನುವುದು ಮತ್ತೊಂದು ಆರೋಪ.

ಕಳೆದ ಲೋಕಸಭೆ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಗಮನಿಸಿದರೆ, ಸುಷ್ಮಾ ಮತ್ತು ವಿದ್ಯಾ ಅವರು ಹೇಳಿಕೆಗಳು ವಿಶ್ಲೇಷಣೆಗೆ ಅರ್ಹ.2009ರ ಜನವರಿಯಲ್ಲಿ ಮಂಗಳೂರಿನಲ್ಲಿ ನಡೆದ ಪಬ್‌ ದಾಳಿ ಪ್ರಕರಣದ ಮೂಲಕ ಕರಾವಳಿಯಲ್ಲಿ ಇರುವ ‘ಅನೈತಿಕ ಪೊಲೀಸ್‌ ಗಿರಿ’ ದೇಶಾದ್ಯಂತ ಸುದ್ದಿ ಮಾಡಿತು. ಮಂಗಳೂರಿನ ಸಾಮಾಜಿಕ ಕಾರ್ಯಕರ್ತರು ಶ್ರೀರಾಮ್‌ ಸೇನೆಯ ಪ್ರಮೋದ್‌ ಮುತಾಲಿಕ್‌ ಅವರಿಗೆ ಪಿಂಕ್‌ ಚಡ್ಡಿಗಳನ್ನು ಕಳುಹಿಸುವ ಮೂಲಕ ಬೃಹತ್‌ ಪ್ರತಿಭಟನೆಯೂ ವ್ಯಕ್ತಪಡಿಸಿದ್ದರು.

ಆದರೆ, ವಾಸ್ತವವಾಗಿ ಮೇಲ್ವರ್ಗದ ಜನತೆಯನ್ನು ಕಾಡಿದ ಪಬ್ ದಾಳಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮಧ್ಯಮ ವರ್ಗವನ್ನು ಕಾಡಿದಂತೆ ಕಾಣಲಿಲ್ಲ. ‘ಮಕ್ಕಳು ಹಾದಿ ತಪ್ಪಿದರೆ ಹೀಗೇ ಆಗುವುದು’ ಎಂಬ ಧೋರಣೆಯೊಂದು ಕರಾವಳಿಯ ಜನರಲ್ಲಿ ಇತ್ತೇ ವಿನಾ ಇದು ‘ವ್ಯಕ್ತಿ ಸ್ವಾತಂತ್ರ್ಯ ಅಥವಾ ಅಭಿವ್ಯಕ್ತಿಯ ಮೇಲಿನ ಘಾಸಿ’ ಎಂಬ ಅರಿವು ಮೂಡಿಸಿದಂತಿಲ್ಲ. ಅದೇ ವರ್ಷ ಏಪ್ರಿಲ್‌ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿತ್ತು.

ಆದರೆ, 2012 ರ ಜುಲೈನಲ್ಲಿ ನಡೆದ ಹೋಮ್‌ಸ್ಟೇ ದಾಳಿ ಅತ್ಯಂತ ಕೆಟ್ಟದಾಗಿತ್ತು. ದಾಳಿಯ ದೃಶ್ಯಗಳು ಮಾಧ್ಯಮಗಳಲ್ಲಿ ಪದೇ ಪದೇ ಕಾಣಿಸಿಕೊಂಡಾಗ, ಪರಿಸ್ಥಿತಿ ಹದ ಮೀರಿರುವುದು ಜನರ ಅರಿವಿಗೆ ಬಂದಿತ್ತು. 2013ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ದಕ್ಷಿಣ ಕನ್ನಡದಲ್ಲಿ ತನ್ನ ತೆಕ್ಕೆಯಲ್ಲಿದ್ದ ನಾಲ್ಕು ಸೀಟುಗಳ ಪೈಕಿ ಮೂರೂ ಸೀಟುಗಳನ್ನು ಕಳೆದುಕೊಂಡು ನೆಲಕಚ್ಚಿತು.

ಹೀಗಾದರೂ ಪ್ರಸ್ತುತ ಚುನಾವಣೆಯತ್ತ ಗಮನ ಹರಿಸಿದರೆ ಕರಾವಳಿಯಲ್ಲಿ ಅನೈತಿಕ ಪೊಲೀಸ್‌ಗಿರಿ ಚುನಾವಣೆಯ ವಿಷಯವೇ ಅಲ್ಲ ಎನ್ನುವುದು ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳ ಅನಿಸಿಕೆ. ‘ಅನೈತಿಕ ಪೊಲೀಸ್‌ಗಿರಿಯಿಂದಾಗಿ ಬಜರಂಗದಳ, ಹಿಂದೂ ಜಾಗರಣ ವೇದಿಕೆ ಸಂಘಟನೆಗಳು ಹೆಸರು ಕೆಡಿಸಿಕೊಂಡಿವೆ. ಹಿರಿಯ ನಾಯಕರಿಗೆ ಅದನ್ನು ಸಮರ್ಥಿಸುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದಲೇ ಈ ಬಾರಿ ಲವ್‌ಜಿಹಾದ್‌ ಎಂಬ ವಿಷಯವನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆಯುತ್ತಿದೆ’ ಎನ್ನುತ್ತಾರೆ ಸ್ಥಳೀಯ ಪ್ರಗತಿಪರರು.

ಶಾಸಕ ಜೆ. ಆರ್‌. ಲೋಬೊ ಈ ವಿಷಯವನ್ನು ನಿರುದ್ಯೋಗ ಸಮಸ್ಯೆಯ ಪರಿಣಾಮ ಎಂದು ವಿಶ್ಲೇಷಿಸುತ್ತಾರೆ ‘ವಾಸ್ತವವಾಗಿ ಇಲ್ಲಿನ ಯುವಜನತೆಗೆ ಕೈ ತುಂಬ ಕೆಲಸ ಕೊಟ್ಟರೆ ಎಲ್ಲ ಸಮಸ್ಯೆಯೂ ಪರಿಹಾರ ಆಗುತ್ತದೆ. ಉದ್ಯೋಗ ಸೃಷ್ಟಿಯ ಉದ್ದೇಶದಿಂದಲೇ ಕಾಂಗ್ರೆಸ್‌ ಅಭಿವೃದ್ಧಿಯ ಪ್ರಣಾಳಿಕೆಯೊಂದಿಗೆ ಚುನಾವಣೆ ಎದುರಿಸುತ್ತಿದೆ’ ಎಂದು ವಿಶ್ಲೇಷಿಸುತ್ತಾರೆ. ಈ ಮಾತನ್ನೇ ಶಾಸಕ ಐವನ್‌ ಡಿಸೋಜ ಸಮರ್ಥಿಸುತ್ತಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English