ಬಸ್‌ಗೆ ನುಗ್ಗಿ ಹಲ್ಲೆ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಾಸಕ ಲೋಬೋ ಆಗ್ರಹ

9:49 AM, Thursday, February 22nd, 2018
Share
1 Star2 Stars3 Stars4 Stars5 Stars
(No Ratings Yet)
Loading...

j-r-loboಮಂಗಳೂರು: ನಗರದ ಬೆಂಗರೆ ಕಸಬಾ ಹಾಗೂ ತೋಟಬೆಂಗರೆಯಲ್ಲಿ ಮಂಗಳವಾರ ರಾತ್ರಿ ಬಸ್‌ಗೆ ನುಗ್ಗಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಜೆ.ಆರ್.ಲೋಬೋ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಬುಧವಾರ ಘಟನೆ ನಡೆದ ಈ ಎರಡು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮಂಗಳವಾರ ಸಂಜೆ ಮಲ್ಪೆಯಲ್ಲಿ ನಡೆದ ಮೀನುಗಾರರ ಸಮಾವೇಶಕ್ಕೆ ಬೆಂಗ್ರೆಯಿಂದ ಐದು ಬಸ್‌ಗಳಲ್ಲಿ ಮೀನುಗಾರರು ತೆರಳಿದ್ದರು. ತಡರಾತ್ರಿ ವಾಪಸ್‌ ಬರುತ್ತಿದ್ದಾಗ ಕೊನೆಯ ಬಸ್‌ನಲ್ಲಿದ್ದ ಮಂದಿ ಕಸಬಾ ಬೆಂಗ್ರೆಯಲ್ಲಿ ಘೋಷಣೆ ಕೂಗಿದ್ದರು. ಆಗ ದುಷ್ಕರ್ಮಿಗಳು ನುಗ್ಗಿ ಬಸ್‌ನಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದರು.

ಈ ಕುರಿದು ಮಾತನಾಡಿದ ಶಾಸಕರು ಘಟನೆಯ ನಂತರ ಎರಡೂ ಕಡೆಯ ಮುಖಂಡರು ಸೇರಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಆದರೆ ನಸುಕಿನ ಜಾವ ಎರಡೂ ಗುಂಪಿಗೆ ಸೇರಿದ ಆಸ್ತಿಪಾಸ್ತಿಯನ್ನು ಹಾನಿಗೊಳಿಸುವ ಕೃತ್ಯ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರ ಮೇಲೂ ಹಲ್ಲೆ ನಡೆಸಲಾಗಿದೆ. ಕೊನೆಗೂ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ ಎಂದರು.

ಬುಧವಾರ ನಾನು ಬೆಂಗ್ರೆಗೆ ಭೇಟಿ ನೀಡಿ ಉಭಯ ಕೋಮಿನ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದೇನೆ. ಬೆಂಗ್ರೆಗೆ ತೆರಳಲು ಒಂದೇ ರಸ್ತೆ ಇದ್ದು, ಇಂತಹ ಘಟನೆಗಳು ಸಂಭವಿಸಿದರೆ, ಉಳಿದ ಕುಟುಂಬಗಳ ನೆಮ್ಮದಿಗೆ ಭಂಗ ಉಂಟಾಗುತ್ತದೆ. ಆದ್ದರಿಂದ ಘಟನೆಯಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದರು.

ಈ ಘಟನೆ ರಾಜಕೀಯ ದುರುದ್ದೇಶದಿಂದ ನಡೆದಿಲ್ಲ. ಇದೊಂದು ಕಿಡಿಗೇಡಿಗಳ ಕೃತ್ಯವಾಗಿದೆ. ಇದುವರೆಗೆ ಬೆಂಗ್ರೆಯಲ್ಲಿ ಶಾಂತಿ ಕದಡಿದ ಉದಾಹರಣೆಗಳು ಇಲ್ಲ. ಈ ಘಟನೆ ನನಗೆ ಬೇಸರ ತರಿಸಿದೆ. ಇನ್ನು ಮುಂದೆ ಇಂತಹ ಘಟನೆಗಳಿಗೆ ಅವಕಾಶ ನೀಡಬಾರದು ಎಂದರು.

ನಗರ ಪಾಲಿಕೆ ಸದಸ್ಯ ಎ. ಸಿ. ವಿನಯರಾಜ್, ನಾಯಕರಾದ ಟಿ. ಕೆ. ಸುಧೀರ್, ಮೋಹನ್ ಮೆಂಡನ್, ಸಲೀಂ ಮೊದಲಾದವರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English