ಬಿಜೆಪಿ ಕ್ಯಾನ್ಸರ್ ಇದ್ದಂತೆ… ಬಿಜೆಪಿಗೆ ಮತ ಹಾಕಬೇಡಿ : ಪ್ರಕಾಶ ರೈ

5:22 PM, Wednesday, April 11th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

prakash-raiಬೆಳಗಾವಿ: ಕೇಂದ್ರದ ಜತೆಗೆ ದೇಶದ 21 ರಾಜ್ಯಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಭಾರತೀಯ ಜನತಾ ಪಕ್ಷ ಕ್ಯಾನ್ಸರ್ ಇದ್ದಂತೆ ಎಂದು ಬಹುಭಾಷಾ ನಟ ಪ್ರಕಾಶ ರೈ ಲೇವಡಿ ಮಾಡಿದ್ದಾರೆ.

ಬೆಳಗಾವಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕೋಮುವಾದಿ ಪಕ್ಷ. ಕೋಮುವಾದ ಪ್ರತಿಪಾದಿಸುವ, ಸಂವಿಧಾನ ಬದಲಿಸುತ್ತೇನೆ ಎಂದು ಹೇಳುವ ಪಕ್ಷ ಅಧಿಕಾರದಲ್ಲಿ ಇರಬಾರದು. ಪ್ರತಿಪಕ್ಷಗಳನ್ನು ನಾಯಿ, ಬೆಕ್ಕಿಗೆ ಹೋಲಿಕೆ ಮಾಡಿರುವ ಬಿಜೆಪಿ ಅಧ್ಯಕ್ಷರ ವಿರುದ್ಧ ಉತ್ತರ ಪ್ರದೇಶ ಸೇರಿದಂತೆ ಎಲ್ಲಡೆ ಆಂದೋಲನ ನಡೆಯುತ್ತಿದೆ. ಪ್ರಸ್ತುತ ಕೇಂದ್ರ ಸಹಿತ 21 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ 2019ರ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಲಿದೆ ಎಂದು ಭವಿಷ್ಯ ನುಡಿದರು.

ಯಾವುದೇ ಪಕ್ಷ ಬೆಂಬಲಿಸುವಂತೆ ನಾನು ನನ್ನ ಅಭಿಮಾನಿಗಳಿಗೆ ಹೇಳುವುದಿಲ್ಲ. ಆದರೆ ಬಿಜೆಪಿಗೆ ಮತ ಹಾಕದಂತೆ ಕೋರುತ್ತೇನೆ. ಶಾಂತಿಭಂಗ ಮಾಡುವಂಥ ಆಲೋಚನೆಯನ್ನು ಬಿಜೆಪಿಗರು ಹೊಂದಿದ್ದಾರೆ. ಬಹಳಷ್ಟು ಸಮಸ್ಯೆಗಳು ಇದ್ದರೂ ಬಿಜೆಪಿಗರು ಆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಮಹಾತ್ಮ ಗಾಂಧೀಜಿಯಂತೆ ಚರಕದ ಮುಂದೆ ಕುಳಿತು ಫೋಟೊ ಕ್ಲಿಕ್ಕಿಸಿಕೊಳ್ಳುವ ಪ್ರಧಾನಿಗಳು ಗಾಂಧೀಜಿಯವರ ಆಲೋಚನೆ ಒಪ್ಪುವುದಿಲ್ಲ. ಕೈಮಗ್ಗಗಳ ಮೇಲೆ ಶೇ. 15ರಷ್ಟು ಸರಕು ಮತ್ತು ಸೇವಾ ತೆರಿಗೆ ವಿಧಿಸಲಾಗಿದೆ. ಈ ರೀತಿಯ ದ್ವಂದ್ವ ನಿಲುವು ಏಕೆ ಎಂದು ಕಿಡಿಕಾರಿದರು.

ಕಾವೇರಿ ಹಾಗೂ ಮಹದಾಯಿ ಸಮಸ್ಯೆಗಳು ಬಗೆಹರಿಯದ ಸಮಸ್ಯೆಗಳೇನೂ ಅಲ್ಲ. ಈ ಎರಡೂ ಸಮಸ್ಯೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ರಾಜಕೀಯ ಇಚ್ಛಾಶಕ್ತಿ ಕಾರಣಕ್ಕೆ ಇದು ಸಮಸ್ಯೆ ಆಗಿಯೇ ಉಳಿದಿದ್ದು, ಈ ರೀತಿ ಮನಸ್ಥಿತಿ ಬದಲಾಗುವವರೆಗೂ ಸಮಸ್ಯೆ ಬಗೆಹರಿಯುವುದಿಲ್ಲ. ನೈಲ್ ನದಿಯನ್ನು ಮೂರು ದೇಶಗಳು ಹಂಚಿಕೊಳ್ಳುತ್ತಿವೆ ಎಂದ ಮೇಲೆ ಎರಡು ರಾಜ್ಯಗಳಿಗೆ ಸಂಬಂಧಿಸಿದ ಕಾವೇರಿ ಹಾಗೂ ಮಹಾದಾಯಿ ಸಮಸ್ಯೆ ಬಗೆಹರಿಸುವುದು ದೊಡ್ಡ ಮಾತಲ್ಲ. ಯಾವ ಸರ್ಕಾರವೂ ತಜ್ಞರ ಜತೆಗೆ ಮಾತುಕತೆಗೆ ಮುಂದಾಗುತ್ತಿಲ್ಲ. ಕಾವೇರಿ ಹಾಗೂ ಮಹದಾಯಿ ವಸ್ತುಸ್ಥಿತಿ ಬಗ್ಗೆ ಜೆಸ್ಟ್ ಆಸ್ಕ್ ಫೌಂಡೇಶನ್ ವತಿಯಿಂದ ಸಾಕ್ಷ್ಯ ಚಿತ್ರ ನಿರ್ಮಿಸಲಾಗುತ್ತಿದೆ. ಕಾವೇರಿಯ ವಾಸ್ತವ ಸಮಸ್ಯೆಯನ್ನು ಸಾಕ್ಷ್ಯ ಚಿತ್ರದಲ್ಲಿ ತೋರಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English