ಜೆಡಿಎಸ್-ಕಾಂಗ್ರೆಸ್ ಮೈತ್ರಿ, ಪ್ರಜಾತಂತ್ರದ ಕಟು ಅಣಕ!

4:28 PM, Tuesday, May 15th, 2018
Share
1 Star2 Stars3 Stars4 Stars5 Stars
(1 rating, 1 votes)
Loading...

kumaraswamyಬೆಂಗಳೂರು: ಕರ್ನಾಟಕದ ಜನತೆಯ ಮತಗಳಿಗೆ, ಮತ ಪ್ರಹಾಪ್ರಭುವಿನ ನಾಲ್ಕು ಕಾಸಿನ ಕಿಮ್ಮತ್ತಿಲ್ಲದಂತೆ, ಪ್ರಜಾಪ್ರಭುತ್ವಕ್ಕೂ ಬೆಲೆಯಿಲ್ಲದಂತೆ ಕಾಂಗ್ರೆಸ್ ಪಕ್ಷ ಜಾತ್ಯತೀಯ ಜನತಾದಳಕ್ಕೆ ಸರಕಾರ ರಚಿಸಲು ಬೆಂಬಲ ನೀಡಿದೆ. ಕುಮಾರಸ್ವಾಮಿಯವರ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ.

ಜಾತ್ಯತೀತ ಜನತಾದಳವನ್ನು ಭಾರತೀಯ ಜನತಾ ಪಕ್ಷದ ‘ಬಿ ಟೀಮ್’ ಎಂದು ಪ್ರಚಾರ ಸಮಾವೇಶವೊಂದರಲ್ಲಿ ಬಹಿರಂಗವಾಗಿ ಜರಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಈಗ ಬಹಿರಂಗವಾಗಿಯೇ ಅದೇ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಇಲ್ಲಿ ಏನು ಬೇಕಾದರೂ ಆಗಬಹುದು. ಅವರಿಗೆ ಅಧಿಕಾರ ಸಿಗಬಾರದೆಂದು ಎಂಥ ಅಪವಿತ್ರ ಮೈತ್ರಿಗೂ ಸಿದ್ಧವಿರುವ ನಾಯಕರಿರುವಾಗ ಜನದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇರುವುದಿಲ್ಲ. ದ್ವೇಷ ಸಾಧಿಸುತ್ತಲೇ ಬಂದಿರುವ ವೈರಿಗಳು ಅಧಿಕಾರಕ್ಕಾಗಿ ಮಿತ್ರರಾಗಿಬಿಡುತ್ತಾರೆ. ನಾನು ಕಿಂಗ್ ಮೇಕರ್ ಆಗಲಾರೆ, ನಾನೇ ಕಿಂಗ್ ಎಂದು ಘೋಷಿಸಿದ್ದ ಕುಮಾರಸ್ವಾಮಿಯವರೇ ಈಗ ಕಿಂಗ್ ಮೇಕರ್ ಆಗಿದ್ದಾರೆ. ಅಂದುಕೊಂಡಂತೆ, ಕುಮಾರಸ್ವಾಮಿಯವರಿಗೆ ಮತ್ತೆ ಮುಖ್ಯಮಂತ್ರಿಯಾಗುವ ಅವಕಾಶ ಒದಗಿ ಬಂದಿದೆ.

ಅತ್ಯಂತ ಕಡಿಮೆ ಸೀಟು ಗಳಿಸಿರುವ ಪಕ್ಷ ಅಧಿಕಾರ ರಚಿಸಲು ಸಿದ್ಧವಾಗಿರುವುದು ಪ್ರಜಾತಂತ್ರದ ಅಣಕ ಮತ್ತು ವಿಪರ್ಯಾಸ. ಕರ್ನಾಟಕದ ಬಹುತೇಕ ಮತದಾರರು ಬಿಜೆಪಿ ಸರಕಾರ ರಚನೆಯಾಗಬೇಕೆಂದು ಅಂಕಿತ ಹಾಕಿದ್ದರೆ, ಕಡಿಮೆ ಸ್ಥಾನ ಗಳಿಸಿರುವ ಜೆಡಿಎಸ್ ಸರಕಾರ ರಚಿಸುವಂತಾದರೆ ವಿಪರ್ಯಾಸವಲ್ಲದೆ ಇನ್ನೇನು? ಒಂದು ವೇಲೆ ಭಾರತೀಯ ಜನತಾ ಪಕ್ಷದ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡು ಸರಕಾರ ರಚಿಸಲು ಮುಂದಾದರೆ ಅದಕ್ಕೊಂದು ಅರ್ಥವಿರುತ್ತದೆ, ಜನಾದೇಶಕ್ಕೂ ಬೆಲೆಯಿರುತ್ತದೆ.

ಆದರೆ, ಇದು ಪ್ರಜಾಪ್ರಭುತ್ವ, ಹಲವಾರು ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ. 2004ರಲ್ಲಿ ಇಂಥದೇ ಪರಿಸ್ಥಿತಿ ಉದ್ಭವವಾಗಿತ್ತು. ಬಿಜೆಪಿ 79 ಸ್ಥಾನಗಳಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ 65 ಮತ್ತು ಜೆಡಿಎಸ್ 58 ಸ್ಥಾನಗಳಲ್ಲಿ ವಿಜಯಿಯಾಗಿತ್ತು. ಆಗ, ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಟ್ವೆಂಟಿ ಟ್ವೆಂಟಿ ಸರಕಾರ ರಚಿಸಿದ್ದು. 20 ತಿಂಗಳು ಆಡಳಿತ ನಡೆಸಿದ್ದ ಕುಮಾರಸ್ವಾಮಿಯವರು, ಯಡಿಯೂರಪ್ಪನವರು ಅಧಿಕಾರ ವಹಿಸಿ 7 ದಿನಗಳಲ್ಲಿಯೇ ತಮ್ಮ ಮಾತು ಕೇಳುತ್ತಿಲ್ಲವೆಂದು ಬೆಂಬಲ ಹಿಂತೆಗೆದುಕೊಂಡಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English