- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಮ್ಮಿಶ್ರ ಸರಕಾರದ ನೂತನ ಸಚಿವರಿಂದ ಪ್ರಮಾಣವಚನ ಸ್ವೀಕಾರ

revanna [1]ಬೆಂಗಳೂರು: ರಾಜ್ಯ ಸಚಿವ ಸಂಪುಟಕ್ಕೆ ನೂತನವಾಗಿ ಸೇರ್ಪಡೆಗೊಂಡಿರುವ ಸಚಿವರುಗಳು ಬೆಂಗಳೂರಿನ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಜೂಭಾಯ್ ವಾಲಾ ಪ್ರಮಾಣ ವಚನ ಬೋಧಿಸಿದರು.

ಕಾಂಗ್ರೆಸ್ ನಿಂದ 15 ಮತ್ತು ಜೆಡಿಎಸ್ ನಿಂದ 10 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಮೊದಲು ಎಚ್.ಡಿ. ರೇವಣ್ಣ ಸಂಪುಟ ದರ್ಜೆ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅವರನ್ನು ರಾಜ್ಯಪಾಲರು ಹೂಗುಚ್ಚ ನೀಡಿ ಅಭಿನಂದಿಸಿದರು. ಬಳಿಕ ಆರ್.ವಿ.ದೇಶಪಾಂಡೆ ,ಬಂಡೆಪ್ಪ ಕಾಶೆಂಪುರ್‌ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕರಿಸಲು ವೇದಿಕೆಗೆ ಡಿ.ಕೆ.ಶಿವಕುಮಾರ್ , ಯು.ಟಿ. ಖಾದರ್ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲುಮುಟ್ಟಿತ್ತು.

ಡಿಕೆ ಶಿವಕುಮಾರ್ ಬಳಿಕ ಜಿ.ಟಿ.ದೇವೇಗೌಡ ತಾಯಿ ಚಾಮುಂಡೇಶ್ವರಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಜಿಟಿ ದೇವೇಗೌಡ ಪ್ರಮಾಣ ವಚನ ಸ್ವೀಕರಿಸುವಾಗ ‘ಮೈಸೂರು ಹುಲಿಗೆ ಜೈ’ ಎಂಬ ಘೋಷಣೆ ಅಭಿಮಾನಿಗಳಿಂದ ಕೇಳಿ ಬಂತು. ಎಂ.ಸಿ. ಮನಗೋಳಿ ಅವರು ಬಸವಣ್ಣ ಮತ್ತು ಅಂಬಾ ಭವಾನಿ ಹೆಸರಿನಲ್ಲಿ , ರಮೇಶ್ ಜಾರಕಿಹೊಳಿ ಮನೆ ದೇವರು ಲಕ್ಷ್ಮೀದೇವಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಝಮೀರ್ ಅಹ್ಮದ್ ಖಾನ್ ಅವರು ಆಂಗ್ಲ ಭಾಷೆಯಲ್ಲಿ ಅಲ್ಲಾಹು ಮತ್ತು ತಾಯಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನೀಲಿ ಸೂಟ್ ಧರಿಸಿ ಗಮನಸೆಳೆದ ಬಿಎಸ್ಪಿಯ ಎನ್ ಮಹೇಶ್ ಬುದ್ಧ ಮತ್ತು ಅಂಬೇಡ್ಕರ್ ಹೆಸರಲ್ಲಿ, ಆರ್.ಶಂಕರ್ ಮನೆ ದೇವರು ಮೈಲಾರಲಿಂಗೇಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಕೃಷ್ಣಭೈರೇಗೌಡ , ಪ್ರಿಯಾಂಕ್ ಖರ್ಗೆ, ಕೆ.ಜೆ.ಜಾರ್ಜ್‌, ಡಿ.ಪಿ.ತಮ್ಮಣ್ಣ, ಎಸ್.ಆರ್.ಶ್ರೀನಿವಾಸ್, ಸಿಎಸ್ ಪುಟ್ಟರಾಜು, ಯು.ಟಿ. ಖಾದರ್ , ಸಾರಾ ಮಹೇಶ್, ಶಿವಾನಂದ ಪಾಟೀಲ್ , ವೆಂಕಟರಮಣಪ್ಪ, ರಾಜಶೇಖರ್ ಪಾಟೀಲ್ ,ಸಿ. ಪುಟ್ಟರಂಗಶೆಟ್ಟಿ, ಡಾ. ಜಯಮಾಲಾ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ನೂತನ ಸಚಿವರನ್ನು ಅಭಿನಂದಿಸಿದರು.

ವೆಂಕಟರಾವ್ ನಾಡಗೌಡ ಪ್ರಮಾಣ ವಚನ ವೇಳೆ ಹಸಿರು ಶಾಲು ಧರಿಸಿದ್ದರು. 2:20ಕ್ಕೆ ಆರಂಭಗೊಂಡ ಪ್ರಮಾಣ ವಚನ ಕಾರ್ಯಕ್ರಮ 3:25ಕ್ಕೆ ಮುಕ್ತಾಯಗೊಂಡಿತು.