- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಇಂದಿರಾ ಕ್ಯಾಂಟೀನ್, ಅನ್ನಭಾಗ್ಯ ಸಹಿತ ಎಲ್ಲ ಭಾಗ್ಯ ಯೋಜನೆಗಳು ಮುಂದುವರಿಯಲಿದೆ: ಮಾಜಿ ಸಿಎಂ ಸಿದ್ದರಾಮಯ್ಯ

siddaramaih [1]ಬಾದಾಮಿ: ಇಂದಿರಾ ಕ್ಯಾಂಟೀನ್, ಅನ್ನಭಾಗ್ಯ ಸೇರಿದಂತೆ ಹಿಂದಿನ ಸರ್ಕಾರ ಜಾರಿಗೆ ತಂದಿರುವ ಯಾವುದೇ ಯೋಜನೆ ಸ್ಥಗಿತಗೊಳ್ಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಬಾದಾಮಿ ಶಾಸಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಕ್ಷೇತ್ರ ಪ್ರವಾಸ ಸಂದರ್ಭದಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಜಾರಿಗೆ ತಂದಿರುವ ಯಾವುದೇ ಜನಪರ ಕಾರ್ಯಕ್ರಮ ನಿಲ್ಲಲು ಬಿಡುವುದಿಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದ್ದರೂ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಇಂದಿರಾ ಕ್ಯಾಂಟೀನ್ ಸೇರಿದಂತೆ ಎಲ್ಲ ಭಾಗ್ಯ ಯೋಜನೆಗಳು ಯಥಾವತ್ತಾಗಿ ಮುಂದುವರಿಯಲಿದೆ ಎಂದರು.

ಚುನಾವಣೆಯಲ್ಲಿ ನಮಗೆ ಸೋಲಾಗಿರಬಹುದು. ಆದರೆ, ಅಧಿಕಾರದಲ್ಲಿ ಇದ್ದಾಗ ಜನರಿಗಾಗಿ ಒಳ್ಳೆಯ ಕಾರ್ಯಕ್ರಮಗಳನ್ನು ಜಾರಿಗೆ ತಂದ ತೃಪ್ತಿ ಇದೆ ಎಂದು ಅವರು ನುಡಿದರು.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆಯೂ ಜಾರಿಗೆ ಬರಲಿದೆ. ಈ ಕುರಿತು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡುವುದಾಗಿ ಹೇಳಿದರು.

ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನ ಕಡಿತ ಆಗಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

ರಾಜಕೀಯ ಚುನಾವಣೆಗೆ ಮಾತ್ರ ಸೀಮಿತ. ಚುನಾವಣೆ ಬಳಿಕ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಅದನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.

ಜೂನ್ 11ರಂದು ಬಾದಾಮಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ‌ಪ್ರಸ್ತುತ ರಾಜಕೀಯ ಬೆಳವಣಿಗೆಗಳು ಹಾಗೂ ಎಲ್ಲ ವಿಷಯಗಳ ಬಗ್ಗೆ ಸುದೀರ್ಘವಾಗಿ ಮಾತನಾಡುತ್ತೇನೆ ಎಂದರು.