ಪ್ರಕೃತಿ ವಿಕೋಪದ ನಷ್ಟಕ್ಕೆ ಪರಿಹಾರದ ಚೆಕ್ ಸಂತ್ರಸ್ತರಿಗೆ ಶೀಘ್ರ ನೀಡಿ : ವೇದವ್ಯಾಸ ಕಾಮತ್

8:56 AM, Saturday, June 23rd, 2018
Share
1 Star2 Stars3 Stars4 Stars5 Stars
(4 rating, 1 votes)
Loading...

Vedavyas Kamathಮಂಗಳೂರು : ಮಳೆ, ನೆರೆ ಮತ್ತು ಪ್ರಕೃತಿ ವಿಕೋಪದಲ್ಲಿ ಆದ ನಷ್ಟಕ್ಕೆ ಪರಿಹಾರದ ಚೆಕ್ ಸಂತ್ರಸ್ತರಿಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ಮಂಗಳೂರು ಮಹಾನಗರ ಪಾಲಿಕೆಯ ಕಡೆಯಿಂದ ವೇಗ ನೀಡಬೇಕು ಎಂದು ಮಂಗಳೂರು ನಗರ ದಕ್ಷಿಣದ ಶಾಸಕ ಡಿ ವೇದವ್ಯಾಸ ಕಾಮತ್ ಪಾಲಿಕೆ ಆಯುಕ್ತರಿಗೆ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗುರುವಾರ ಅವರು ಕಮೀಷನರ್, ಇಂಜಿನಿಯರಿಂಗ್ ಮತ್ತು ಆರೋಗ್ಯ ವಿಭಾಗದ ಅಧಿಕಾರಿಗಳ ಸಭೆ ನಡೆಸಿದರು.

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಡ್ರೈನೇಜ್ ಗೆ ಸಂಬಂಧಪಟ್ಟ ಯಾವ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಮತ್ತು ಯಾವುದು ಅರ‍್ಧಕ್ಕೆ ನಿಂತಿವೆ ಮತ್ತು ಯಾವ ವಾರ‍್ಡಿನಲ್ಲಿ ಡ್ರೈನೇಜ್ ನೀರು ತೆರೆದ ಚರಂಡಿಗಳಲ್ಲಿ ಹೋಗುತ್ತಿವೆ ಎನ್ನುವುದರ ಕುರಿತು ಮಾಹಿತಿಯನ್ನು ೭ ದಿನಗಳೊಳಗೆ ತಮಗೆ ನೀಡಬೇಕು ಎಂದು ಆದೇಶ ನೀಡಿದರು. ಒಳಚರಂಡಿ ವ್ಯವಸ್ಥೆಯಿಂದ ನೀವು ತೆರೆದ ಚರಂಡಿಗೆ ಕನೆಕ್ಷನ್ ಕೊಟ್ಟಿರುವುದರಿಂದ ವಾತಾವರಣ ಗಬ್ಬುವಾಸನೆಯಿಂದ ಸಾರ‍್ವಜನಿಕರಿಗೆ ತೊಂದರೆಯಾಗುತ್ತದೆ. ಇದನ್ನು ಪತ್ತೆ ಹಚ್ಚಿ ಚರಂಡಿಗೆ ಬರುವುದನ್ನು ತಡೆಗಟ್ಟಲು ಕೂಡಲೇ ಕ್ರಮಕೈಗೊಳ್ಳಬೇಕು, ಕಲುಷಿತಗೊಂಡಿರುವ ಬಾವಿಗಳನ್ನು ದುರಸ್ತಿಗೊಳಿಸುವುದರ ಬಗ್ಗೆ ಕ್ರಮ ಕೈಗೊಳ್ಳಲು ಆದೇಶ ನೀಡಿದರು. ಎಸ್ ಎಫ್ ಸಿ ಫಂಡ್, ಮುಖ್ಯಮಂತ್ರಿ 100 ಕೋಟಿ ಅನುದಾನ, 13/14 ನೇ ಹಣಕಾಸು ಯೋಜನೆ, ಅಮೃತ ಯೋಜನೆ, 2ನೇ ಎಡಿಬಿ ಯೋಜನೆಯನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈ ಅನುದಾನದಡಿಯಲ್ಲಿ ಕಾಮಗಾರಿ ಮುಗಿಸಿರುವ ಮತ್ತು ಚಾಲನೆಯಲ್ಲಿ ಇರುವ ಬಗ್ಗೆ ಮಾಹಿತಿ ಕೊಡಬೇಕು ಮತ್ತು ಪ್ರಾರಂಭವೇ ಆಗಿಲ್ಲ ಎಂದಾದರೆ ಅದರ ಕಾರಣಗಳನ್ನು ತಿಳಿಸಿ ಒಂದು ವಾರದ ಒಳಗೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು. ಆಗಬೇಕಾಗಿರುವ ಕಾಮಗಾರಿಗಳನ್ನು ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಶೀಘ್ರದಲ್ಲಿ ಆಗುವ ಹಾಗೆ ನೋಡಿಕೊಳ್ಳಬೇಕು ಎಂದು ಆದೇಶ ನೀಡಿದರು. ಯಾವೆಲ್ಲ ವಾರ‍್ಡುಗಳಲ್ಲಿ ಒಳಚರಂಡಿ ಸಮಸ್ಯೆಗಳು ಇವೆಯೋ ಅದನ್ನು ಸಮರೋಪಾದಿಯಲ್ಲಿ ನಡೆಸಿ ಸಾರ‍್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಚರ‍್ಚೆ ನಡೆಸಲಾಯಿತು.

ಮಂಗಳೂರು ನಗರ ದಕ್ಷಿಣದ 38 ವಾರ‍್ಡುಗಳಲ್ಲಿ 24*7 ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಯಾವ ವಾರ‍್ಡುಗಳಿಗೆ ಕುಡಿಯುವ ನೀರಿನ ಪೂರೈಕೆ ಸಮರ‍್ಪಕವಾಗಿ ಆಗುತ್ತಿಲ್ಲ, ಅಂತಹ ವಾರ‍್ಡುಗಳಲ್ಲಿ ಇರುವ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಹಂತ ಹಂತವಾಗಿ ಅದನ್ನು ಪರಿಹರಿಸಲು ನೀರು ಸರಬರಾಜು ವಿಭಾಗದ ಇಂಜಿನಿಯರ್ ಗಳಿಗೆ ಶಾಸಕರು ಆದೇಶ ನೀಡಿದರು. ಡೆಡ್ ಲೈನ್ ಇಟ್ಟು ಈ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳಿ ಯಾವುದಾದರೂ ಒಂದು ವಾರ‍್ಡಿನಲ್ಲಿ ೨೪*೭ ನೀರು ಬರುವ ವ್ಯವಸ್ಥೆಯನ್ನು ಮಾಡಿ ಮಾದರಿ ವಾರ‍್ಡ್ ಆಗಿ ರೂಪಿಸಬೇಕು ನಂತರ ಹಂತಹಂತವಾಗಿ ಒಂದೊಂದೇ ವಾರ‍್ಡುಗಳಿಗೆ ೨೪*೭ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ಇದಕ್ಕೆ ಒಂದು ವರ‍್ಷದ ಒಳಗೆ ಸಮರ‍್ಪಕವಾಗಿ ಯೋಜನೆ ಕಾರ‍್ಯಗತಗೊಳಿಸಬೇಕು. ಹೀಗೆ ಮಾಡಲು ನಿಮಗೆ ಏನಾದರೂ ತೊಂದರೆ ಇದ್ದರೆ ಸರಕಾರದ ವತಿಯಿಂದ ಬೇಕಾದ ಕೆಲಸಗಳನ್ನು ನಾನು ಮಾಡಿಕೊಡುತ್ತೇನೆ, ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇನ್ನು ಮುಂದೆ ಬರಬಾರದು, ಅದಕ್ಕೆ ಬೇಕಾದ ಕಾರ‍್ಯಯೋಜನೆ ಬೇಗ ರೂಪಿಸಬೇಕು ಎಂದು ಶಾಸಕರು ಸೂಚನೆ ನೀಡಿದರು. ಪಾಲಿಕೆಗೆ ಸೇರಿದಂತಹ ಒವರ್ ಹೆಡ್ ಟ್ಯಾಂಕ್ ಗಳು, ಸಂಪುಗಳ ಕ್ಲೀನಿಂಗ್ ಎಷ್ಟೋ ವರ‍್ಷಗಳಿಂದ ಆಗಿಲ್ಲ ಎಂದು ನನ್ನ ಗಮನಕ್ಕೆ ಬಂದಿದೆ. ಆದ್ದರಿಂದ ಕೂಡಲೇ, ತುಂಬೆಯಿಂದ ನೀರು ಪೂರೈಕೆಯಾಗುವ ರೂಟ್ ಗಳ ಪ್ರಕಾರ ಒವರ್ ಹೆಡ್ ಟ್ಯಾಂಕ್ ಗಳು, ಸಂಪುಗಳ ಕ್ಲೀನಿಂಗ್ ಮಾಡಲು ವ್ಯವಸ್ಥೆ ಮಾಡಬೇಕು.
ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಸಿಲ್ಟ್ ರಿಮೂವಿಂಗ್ ಮಿಶಿನ್, ಜೆಟ್ ಸೆಕ್, ಸೆಸ್ ಪೂಲ್, ಸ್ಕೈಲಿಫ್ಟ್ ಮತ್ತು ಇತರ ಯಂತ್ರಗಳನ್ನು ಸಮರ‍್ಪಕವಾಗಿ ಬಳಸಬೇಕು ತುಂಬೆಯಿಂದ ಮಂಗಳೂರಿನವರೆಗೆ ಇರುವ ಅನಧಿಕೃತ ನಳ್ಳಿಗಳ ಜೋಡಣೆ, ವೆಟ್ ವೆಲ್, ಟ್ರೀಟ್ ಮೆಂಟ್ ಪ್ಲಾಂಟ್ ಗಳ ಪಟ್ಟಿ ಮತ್ತು ಅಲ್ಲಿರುವ ಸಿಬ್ಬಂದಿಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಆದೇಶ ನೀಡಿದರು.

ಸ್ಮಾರ‍್ಟ್ ಸಿಟಿಯ ಕಾಮಗಾರಿ ಈಗ ಯಾವ ಹಂತದಲ್ಲಿದೆ ಎನ್ನುವುದರ ಮಾಹಿತಿ ಪಡೆದುಕೊಂಡ ಶಾಸಕರು ಅದನ್ನು ಶೀಘ್ರದಲ್ಲಿ ಅನುಷ್ಟಾನಕ್ಕೆ ತರುವ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಸೂಚನೆ ನೀಡಿದರು. ಪಾಲಿಕೆಯ ವ್ಯಾಪ್ತಿಯಲ್ಲಿ ಡ್ರೈನೇಜ್ ವ್ಯವಸ್ಥೆ ಸರಿಪಡಿಸಲು ಇರುವ , ದಾರಿದೀಪ ಮತ್ತು ನಿರ‍್ವಹಣೆ ಮಾಡುವ ಬಗ್ಗೆ ಮತ್ತು ನಳ್ಳಿನೀರಿನ ಬಿಲ್ ಮತ್ತು ಲಿಕೇಜ್ ವ್ಯವಸ್ಥೆ ಸಮರ‍್ಪಕವಾಗಿ ಆಗದಿರುವ ಮತ್ತು ಕೆಲವು ಕಡೆ ಅವೈಜ್ಞಾನಿಕ ಬಿಲ್ ನೀಡಿರುವ ಕುರಿತು ಕ್ರಮ ಕೈಗೊಳ್ಳುವ ಬಗ್ಗೆ ಶಾಸಕರು ಸೂಚನೆ ನೀಡಿದರು. ಮಂಗಳೂರು ನಗರದ ಟ್ರಾಫಿಕ್ ಜಾಮ್ ಸಮಸ್ಯೆಯ ಬಗ್ಗೆ ಕ್ರಮ ತೆಗೆದುಕೊಳ್ಳಲು ಚರ‍್ಚೆ ನಡೆಸಿದರು.

ಮಂಗಳೂರಿನಲ್ಲಿ ಕಸ ವಿಲೇವಾರಿಯ ಬಗ್ಗೆ ಸಾರ‍್ವಜನಿಕರಿಗೆ ಆಗುವ ತೊಂದರೆ ಯಾವ ನಿಟ್ಟಿನಲ್ಲಿ ಪರಿಹರಿಸಲು ಸಾಧ್ಯ ಎಂಬ ಬಗ್ಗೆ ಆರೋಗ್ಯ ಇಲಾಖೆಯವರು ಕ್ರಮ ಕೈಗೊಳ್ಳಬೇಕು. ಒಂದು ಮೀಟರ್ ಅಗಲದ ಚರಂಡಿಯಿಂದ ಹೂಳು ತೆಗೆಯುವ ಕಾಂಟ್ರೆಕ್ಟ್ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್ ನವರಿಗೆ ಇತ್ತು. ಅವರು ತೆಗೆಯದೇ ಇದ್ದ ಕಾರಣ ಮೊನ್ನೆಯ ಮಳೆಯಲ್ಲಿ ಸಾರ‍್ವಜನಿಕರಿಗೆ ತುಂಬಾ ಕಷ್ಟನಷ್ಟ ಉಂಟಾಗಿದೆ. ಕೂಡಲೇ ಮೊನ್ನೆ ಬಂದಿರುವ ಪ್ರದೇಶಗಳ ಚರಂಡಿಯಿಂದ ಹೂಳು ತೆಗೆಯಲು ಕಟ್ಟುನಿಟ್ಟಾಗಿ ಕ್ರಮ ಜರುಗಿಸಬೇಕು, ಎಲ್ಲೆಲ್ಲಿ ಹೂಳು ತೆಗೆಯಲಾಗಿದೆ ಎಂಬುದನ್ನು ಫೋಟೋ ಸಹಿತ ಲಾಗ್ ಬುಕ್ ನಲ್ಲಿ ಎಂಟ್ರಿ ಮಾಡಬೇಕು. ಮನೆಮನೆಯಿಂದ ಒಣಕಸ, ಹಸಿಕಸ, ಕೊಟ್ಟರೂ ಕೂಡ ಅದನ್ನು ಒಟ್ಟಾಗಿ ಸೇರಿಸಿ ಒಂದೇ ವಾಹನದಲ್ಲಿ ಗುತ್ತಿಗೆದಾರರು ಕೊಂಡುಹೋಗುವುದನ್ನು ತಡೆಗಟ್ಟಬೇಕು. ನಾಗರಿಕರಲ್ಲಿ ಒಣಕಸ, ಹಸಿಕಸ ಬೇರ‍್ಪಡಿಸಿ ನೀಡುವ ಬಗ್ಗೆ ಜನಜಾಗೃತಿ ಕೈಗೊಳ್ಳಬೇಕು ಎಂದು ತಿಳಿಸಿದರು.

ಜನನ ಮತ್ತು ಮರಣ ಪ್ರಮಾಣ ಪತ್ರ, ಉದ್ದಿಮೆ ಪರವಾನಿಗೆ ನೀಡುವುದರಲ್ಲಿ ಸಾರ‍್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ದೂರು ಬಂದಿದೆ. ಈ ಮೊದಲು ಇಲ್ಲದ ಸಮಸ್ಯೆಗಳು ಈಗ ಯಾಕೆ ಉದ್ಭವವಾಗುತ್ತಿವೆ ಎನ್ನುವ ಬಗ್ಗೆ ಮಾಹಿತಿ ಪಡೆದುಕೊಂಡು ಸಾರ‍್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸಲಹೆ ನೀಡಿದರು.

ಮುಂದಿನ ದಿನಗಳಲ್ಲಿ ಪಾಲಿಕೆಯ ಇತರ ವಿಭಾಗದ ಅಧಿಕಾರಿಗಳ ಸಭೆ ನಡೆಸಿ ಸಾರ‍್ವಜನಿಕರ ಕುಂದುಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕರು ತಿಳಿಸಿದರು.

ಪಾಲಿಕೆಯ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ರಾಜೇಂದ್ರ, ದಿವಾಕರ್ ಪಾಂಡೇಶ್ವರ, ಸುರೇಂದ್ರ, ಪೂರ‍್ಣಿಮಾ, ಜಯಂತ್ ಆಚಾರ್, ಮಾಜಿ ಸದಸ್ಯ ಭಾಸ್ಕರಚಂದ್ರ ಶೆಟ್ಟಿ ಹಾಗೂ ಬಿಜೆಪಿ ಮುಖಂಡ ರಮೇಶ್ ಕಂಡೆಟ್ಟು ಮತ್ತಿತರರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English