ಬಿಳಿನೆಲೆ ಒಂಟಿ ಆನೆ ದಾಳಿಗೆ ಯಾತ್ರಿಕರ ಓಮ್ನಿ ಕಾರು ಧ್ವಂಸ

12:04 AM, Sunday, June 24th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Elephant attack ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುತ್ತಿದ್ದ ಯಾತ್ರಾರ್ಥಿಗಳ ಕಾರಿನ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ ಘಟನೆ ಶನಿವಾರದಂದು ನಡೆದಿದೆ. ಮುಂಜಾನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಕುಡ್ಲೂರು ನಿವಾಸಿ ಗಿರೀಶ್ ಎಂಬವರ ಕಾರಿನಲ್ಲಿ ೮ಜನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುತ್ತಿದ್ದ ವೇಳೆ ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ ಬಿಳಿನೆಲೆ ಸಮೀಪದ ಕಿದುವಿನಲ್ಲಿ ಕಾಡಾನೆ ದಾಳಿ ನಡೆದಿದೆ.

ಧರ್ಮಸ್ಥಳದಲ್ಲಿ ದೇವರ ದರುಶನ ಮುಗಿಸಿ ಸುಬ್ರಹ್ಮಣ್ಯಕ್ಕೆ ಪೂಜೆಗೆಂದು ಬರುವ ವೇಳೆ ಆಮ್ನಿ ಕಾರನ್ನು ಅಡ್ಡಗಟ್ಟಿ ದಾಳಿ ನಡೆಸಿದೆ. ಕಾರನ್ನು ಗಿರೀಶ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಬಿಳಿನೆಲೆ ಕಿದು ಸಮೀಪ ರಸ್ತೆ ಮದ್ಯದಲ್ಲಿ ಕಾಡಾನೆ ಮುಂಜಾನೆ 7.30ರ ಸಮಯದಲ್ಲಿ ಪ್ರತ್ಯಕ್ಷವಾಗಿದೆ. ಈ ವೇಳೆ ಗಿರೀಶ್ ಕಾರನ್ನು ನಿಲ್ಲಿಸಿದ್ದಾರೆ. ಕೂಡಲೇ ಕಾಡಾನೆ ಕಾರಿನ ಮೇಲೆ ಏಕಾಏಕಿ ದಾಳಿ ನಡೆಸಿದೆ. ಕಾರಿನ ಮುಂಭಾಗಕ್ಕೆ ತೀರ್ವವಾಗಿ ತನ್ನ ಕಾಲು ಹಾಗೂ ಸೊಂಡಿನಿಂದ ಹಾನಿ ಮಾಡಿದೆ.

ಪ್ರಾಣಾಪಾಯದಿಂದ ಪಾರದ ಕುಟುಂಬ:
ಕಾಡಾನೆ ದಾಳಿಗೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಗೊಂಡಿದೆ. ಚಾಲಕ ಸೇರಿ ಕಾರಿನಲ್ಲಿದ್ದ ಪಾರ್ವತಮ್ಮ, ಧನ್ಯ, ಪ್ರಭುಕುಮಾರ್, ಭಾಗ್ಯ, ರಾಜ, ಚೈತ್ರ, ಪ್ರತಿಮ, ಮೀನಾಕ್ಷಿ ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಾಳಿ ನಡೆಸುತ್ತಿದ್ದ ವೇಳೆ ಬಸ್ಸೊಂದು ಜೋರಾಗಿ ಹಾರ್ನ್ ಹಾಕುತ್ತಾ ಬಂದ ಕಾರಣ ಕಾಡಾನೆ ಕಾರನ್ನು ಬಿಟ್ಟು ಓಡಿ ಹೊದ್ದರಿಂದ ಬಾರಿ ಅನಾಹುತ ತಪ್ಪಿದೆ. ದಾಳಿ ಸಂದರ್ಭದಲ್ಲಿ ವಾಹನದ ಒಳಗಡೆ ಇದ್ದ ಕುಟುಂಬವು ಭಯದಿಂದ ಮುದುಡಿ ಕುಳಿತಿದ್ದರು. ಆನೆಯು ಮುಂಭಾಗಕ್ಕೆ ಹಾನಿ ಮಾಡಿದುದರಿಂದ ಈ ಸ್ಥಳದಲ್ಲಿ ಕುಳಿತಿದ್ದ ಈರ್ವರಿಗೆ ಗಾಯವಾಗಿದೆ.ಇದೇ ಸಮಯದಲ್ಲಿ ದೇವರಂತೆ ಬಸ್ ಬಂದುದರಿಂದ ಆನೆಯು ಕಾರನ್ನು ಬಿಟ್ಟು ಓಡಿ ಹೋಗಿದೆ.ಗಾಯಾಳುಗಳು ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.ಸ್ಥಳಕ್ಕೆ ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ತ್ಯಾಗರಾಜ್ ಮತ್ತು ಸಿಬ್ಬಂಧಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ತಿಂಗಳಿಂದ ಒಂಟಿ ಆನೆ ಹಾವಳಿ:
ಕಳೆದ ಒಂದು ತಿಂಗಳಿನಿಂದ ಸುಬ್ರಹ್ಮಣ್ಯ, ಬಿಳಿನೆಲೆ, ಕೈಕಂಬ, ಚೇರು, ಭಾಗ್ಯ, ಕೊಂಬಾರು, ಪಂಜ, ಯೇನೆಕಲ್ಲು ಮೊದಲಾದೆಡೆ ಒಂಟಿ ಆನೆಯು ದಾಳಿ ಮಾಡುತ್ತಿದೆ.ಆನೆ ದಾಳಿಗೆ ಕೃಷಿ ತೋಟಗಳು ದ್ವಂಸವಾಗಿದೆ.ಇದರಿಂದ ಅನೇಕ ರೈತರಿಗೆ ಅಪಾರ ಹಾನಿ ಮಾಡಿದೆ.ಇದೆ ಒಂಟಿ ಆನೆ ಓಮಿನಿಯ ಮೇಲೆ ದಾಳಿ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

ಧರ್ಮಸ್ಥಳ ಕ್ಷೇತ್ರ ದರುಶನ ಮಾಡಿ ಸುಬ್ರಹ್ಮಣ್ಯ ದರುಶನ ಮಾಡಲು ತೆರಳುತ್ತಿದ್ದ ನಮಗೆ ದಾರಿ ಮದ್ಯೆ ಆನೆಯ ದಾಳಿಯಾಗಿತ್ತು. ಆನೆಯು ವಾಹನವನ್ನು ಹಾನಿ ಮಾಡುತ್ತಿರುವಾಗ ಹಿಂಬದಿಯಿಂದ ಬಸ್ ಹಾರ್ನ್ ಮಾಡುತ್ತಾ ಬಂದಾಗ ಆನೆ ವಾಹನ ಬಿಟ್ಟು ದೂರ ಸರಿಯಿತು. ನಮಗೆ ಮರು ಜೀವ ದೊರಕಿದಂತಾಗಿದೆ. ಬಾರೀ ಅಪಾಯ ತಪ್ಪಿದೆ ಅನ್ನುವುದು ದೇವರ ಆಶೀರ್ವಾದವಾಗಿದೆ
-ಗಿರೀಶ್, ವಾಹನದ ಚಾಲಕ

ಸುಬ್ರಹ್ಮಣ್ಯ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ನಡೆದಿದೆ. ಈಗಾಗಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಲಾಗಿದೆ.ಅಲ್ಲದೆ ಈ ಬಗ್ಗೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಘಟನೆಯಲ್ಲಿದ್ದವರಿಗೆ ತಿಳಿಸಿದ್ದೇನೆ. ಪೋಲೀಸರು ಈ ಘಟನೆಯ ಬಗ್ಗೆ ವಿವರವನ್ನು ಅರಣ್ಯ ಇಲಾಖೆಗೆ ಒಪ್ಪಿಸುತ್ತಾರೆ. ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು.ಘಟನೆಯಲ್ಲಿ ಹೆಚ್ಚಿನ ಅನಾಹುತ ಸಂಭವಿಸದಿರುವುದು ಭಾಗ್ಯ. ವಾಹನದ ನಷ್ಟವನ್ನು ಅವರು ವಿಮೆ ಮೂಲಕ ಭರಿಸಿಕೊಳ್ಳಬಹುದು
-ತ್ಯಾಗರಾಜ್, ವಲಯಾರಣ್ಯಾಧಿಕಾರಿ ಸುಬ್ರಹ್ಮಣ್ಯ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English