ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನಿಷೇಧ ಮೂರ್ಖತನದ ನಿರ್ಧಾರ

3:53 PM, Saturday, November 24th, 2012
Share
1 Star2 Stars3 Stars4 Stars5 Stars
(10 rating, 2 votes)
Loading...

Plastic Bagಮಂಗಳೂರು :ದಕ್ಷಿಣ ಕನ್ನಡ ಜಿಲ್ಲಾಡಳಿತ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನಿಷೇಧ ಎನ್ನುವ ಬೋರ್ಡ್ ತಗಲಿಸಿ ಬಹಳ ದಿನಗಳೇ ಸರಿದು ಹೋದವು.. ಆದರೆ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಗೊತ್ತಿಲ್ಲ. ಕರ್ನಾಟಕದ ಮಟ್ಟಿಗೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ತಯಾರಿಸುವ ಅತಿ ಹೆಚ್ಚು ಕಂಪೆನಿಗಳು ಇರುವುದು ಮಂಗಳೂರಿನಲ್ಲಿ. ಇದಕ್ಕಾಗಿ ಉದ್ಯಮಿಗಳು ಕೋಟಿಗಳ ರೂಪದಲ್ಲಿ ಬ್ಯಾಂಕ್ ಸಾಲ ಮಾಡಿ ಬಂಡವಾಳ ಹೂಡಿದ್ದಾರೆ. ದ.ಕ. ಜಿಲ್ಲೆಯಲ್ಲಿ ಅಂದಾಜು 50ರಷ್ಟು ಪ್ಲಾಸ್ಟಿಕ್ ತಯಾರಿಕೆ ಘಟಕಗಳು ಮತ್ತು ವರ್ತಕರು ಇದ್ದಾರೆ. ಸುಮಾರು ಐದು ಸಾವಿರ ಮಂದಿ ನೇರವಾಗಿ ಮತ್ತು 10 ಸಾವಿರ ಮಂದಿ ಪರೋಕ್ಷವಾಗಿ ಈ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಕ್ಯಾರಿಬ್ಯಾಗ್ ನಿಷೇಧದಿಂದ ಇವರೆಲ್ಲ ನಿರುದ್ಯೋಗಿಳಾಗುವ ಆತಂಕವಿದೆ.

ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದಂತೆ ಪೂರ್ವ ಭಾವಿಯಾಗಿ ಜಿಲ್ಲಾಧಿಕಾರಿ ಕರೆದಿದ್ದ ಸಭೆಯಲ್ಲಿ ಉದ್ಯಮಿಗಳು ಮತ್ತು ಉದ್ಯೋಗಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ನೀಡಿದ್ದರು ಆದರೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಯಾವುದೇ ಕಾರ್ಯ ಯೋಜನೆ ರೂಪಿಸುವ ಮೊದಲೇ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನಿಷೇಧಿಸಲು ಆತುರತೆ ಪ್ರದರ್ಶಿಸಲಾಗಿದೆ. ಬದಲಿ ವ್ಯವಸ್ಥೆಯನ್ನು ಮಾಡದೆಯೇ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನಿಷೇಧಿಸುವುದರಲ್ಲಿ ಅರ್ಥವೇನಿದೆ? ಜನಸಾಮಾನ್ಯರಿಗೆ ಕಷ್ಟ ಕೊಟ್ಟು ವ್ಯಾಪಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸುವುದು ಮತ್ತು ಫ್ಯಾಕ್ಟರಿ ಮಾಲಕರಿಗೆ ನಷ್ಟ ಉಂಟು ಮಾಡುವುದಲ್ಲದೆ ಬೇರೆ ಸದುದ್ದೇಶವೇನೂ ನಿಷೇಧದ ಹಿಂದೆ ಕಾಣುವುದಿಲ್ಲ ಎನ್ನುತ್ತಾರೆ ಪ್ಲಾಸ್ಟಿಕ್ ಉದ್ಯಮದಲ್ಲಿ ತೊಡಗಿರುವವರು.

ಕೇವಲ ಮಂಗಳೂರು ತಾಲೂಕು ಅಥವಾ ದ.ಕ. ಜಿಲ್ಲೆಗೆ ಸೀಮಿತಗೊಳಿಸಿದರೆ ಯಾವುದೇ ಪ್ರಯೋಜನವಿಲ್ಲ. ದೇಶಾದ್ಯಂತ ಇದನ್ನು ನಿಷೇಧಿಸಿದರೆ ಪ್ಲಾಸ್ಟಿಕ್ ಉತ್ಪನ್ನ ವ್ಯಾಪಾರಿಗಳು, ಏಜೆನ್ಸಿಗಳು, ತಯಾರಕರು ಪರ್ಯಾಯ ವ್ಯವಸ್ಥೆಗೆ ಮನಸ್ಸು ಮಾಡಬಹುದು. ಮಂಗಳೂರಿನಲ್ಲಿ ಮಾತ್ರ ನಿಷೇಧಿಸಿದರೆ ಇದರಿಂದ ಪ್ರಯೋಜನವಿಲ್ಲ. ಕೇರಳದಲ್ಲಿ ಪ್ಲಾಸ್ಟಿಕ್ಗೆ ಒಳ್ಳೆಯ ಬೇಡಿಕೆಯಿದೆ. ಮಂಗಳೂರಿನಲ್ಲಿ ನಿಷೇಧ ಹೇರಿದ್ದರಿಂದ ಪ್ಲಾಸ್ಟಿಕ್ ಉತ್ಪಾದನೆ ಆತಂಕದಿಂದ ಕೂಡಿದೆ. ಹಾಗಾಗಿ ಪ್ಲಾಸ್ಟಿಕ್ ಬಳಕೆ ಅಥವಾ ನಿಷೇಧದ ಬಗೆಗಿನ ಗೊಂದಲವನ್ನು ನಿವಾರಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕಾಗಿದೆ.

ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದಂತೆ ಅಧಿಕೃತ ಆದೇಶ ಏಕೆ ಹೊರಡಿಸುತ್ತಿಲ್ಲ? ಆದೇಶಿಸಿದ್ದರೆ ಆದೇಶ ಪ್ರತಿ ಎಲ್ಲಿದೆ? ದೇಶದಲ್ಲಿ ಎಲ್ಲೂ ಆಗದ ನಿಷೇಧ ಮಂಗಳೂರಿಗೆ ಮಾತ್ರ ಏಕೆ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಗುತಿಲ್ಲ. 40 ಮೈಕ್ರಾನ್ಗಿಂತ ಕಡಿಮೆ ದಪ್ಪ ಇರುವ ಪ್ಲಾಸ್ಟಿಕ್ ಉತ್ಪಾದಿಸಬಾರದು ಎಂದು 2011ರ ಸುಪ್ರೀಂ ಕೋರ್ಟ್ ತೀರ್ಪು ಹೇಳುತ್ತದೆ. ಅಂದರೆ 40 ಮೈಕ್ರಾನ್ಗಿಂತ ದಪ್ಪ ಇರುವ ಮಾತ್ರವಲ್ಲ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕೃತ ಅನುಮತಿಯ ಮುದ್ರೆಯೂ ಇರುವ ಪ್ಲಾಸಿಕ್ ಕ್ಯಾರಿಬ್ಯಾಗ್ ಮಾರದಿರುವಂತೆ ನಿಷೇಧಿಸುವುದು ತಾಂತ್ರಿಕವಾಗಿ ಸಾಧ್ಯವೇ? ವಾಸ್ತವದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸುವುದು ಸಾಧ್ಯವಿಲ್ಲ. ಜಿಲ್ಲಾಧಿಕಾರಿ ಅಧಿಕೃತ ಆದೇಶ ಹೊರಡಿಸಿದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು.

40 ಮೈಕ್ರಾನ್ಗಿಂತ ಹೆಚ್ಚು ದಪ್ಪ ವಿರುವ ಪ್ಲಾಸ್ಟಿಕ್ ನಿಷೇಧಿಸಬೇಡಿ ಎಂದು ಕೃಷ್ಣ ಪಾಲೇಮಾರರು ಪರಿಸರ ಸಚಿರಾಗಿದ್ದಾಗಲೇ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಶಾಸಕ ಯು.ಟಿ. ಖಾದರ್, ವಿಧಾನಸಭೆಯ ಉಪಾಧ್ಯಕ್ಷ ಯೋಗೀಶ್ ಭಟ್ ಕೂಡ ಸಂಪೂರ್ಣ ನಿಷೇಧಬೇಡ ಎಂದು ಕೋರಿಕೆ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳ ಮಾತಿಗೂ ಬೆಲೆ ಕೊಡದೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನಿಷೇಧಿಸುತ್ತಿರುವುದರ ಹಿಂದೆ ಸ್ಥಾಪಿತ ಹಿತಾಸಕ್ತಿಗಳ ಕೈವಾಡವನ್ನು ಅಲ್ಲಗಳೆಯುವಂತಿಲ್ಲ. ಬಟ್ಟೆಯಂತೆ ಕಾಣುವ ಚೀಲಗಳನ್ನು ತಯಾರಿಸುವ ಪ್ರಭಾವಿ ಉದ್ಯಮಿಗಳು ಈ ನಿಷೇಧದ ಹಿಂದಿದ್ದಾರೆ. ದಾಳಿಗೆ ಹೋಗುವ ಅಧಿಕಾರಿಗಳ ಹಿಂದೆ ಇಂತಹ ಪ್ರಭಾವಿ ಕಂಪೆನಿಗಳ ಪ್ರತಿನಿಧಿಗಳೂ ಇರುತ್ತಾರೆ. ದಾಳಿ ನಡೆಸಿದ ಅಧಿಕಾರಿಗಳು ಪ್ಲಾಸ್ಟಿಕ್ ಚೀಲಗಳ ಕಟ್ಟು ಹೊತ್ತೊಯ್ದ ಬಳಿಕ ಇವರು ತಮ್ಮ ವಿಸಿಟಿಂಗ್ ಕಾರ್ಡ್ ಕೊಟ್ಟು ತಮ್ಮಲ್ಲಿ ತಯಾ ರಾಗುವ ಪೊಲಿಪ್ರಾಪಲಿನ್ ಚೀಲ ಮಾರಲು ಸಲಹೆ ನೀಡುತ್ತಾರೆ. ಪೊಲಿಪ್ರಾಪಲಿನ್ ಕೂಡ ಪ್ಲಾಸ್ಟಿಕ್ ಎಂಬುದು ಅಧಿಕಾರಿಗಳಿಗೆ ಗೊತ್ತಿಲ್ಲದ ಸಂಗತಿ ಏನಲ್ಲ. ಆದರೆ ಇದರ ವ್ಯವಹಾರ ಹೆಚ್ಚಿಸಲು ನಿಷೇಧದ ನಾಟಕ ಆಡಲಾಗುತ್ತಿದೆ. ವ್ಯಾಪಾರಿಗಳು ಮಾತ್ರವಲ್ಲ ಜನರೂ ಕೂಡ ಜಾಗೃತರಾಗಿ ನಿಷೇಧದ ಹಿಂದಿನ ಮರ್ಮವನ್ನು ಪ್ರಶ್ನಿಸುವಂತಾಗಬೇಕು. ನಿಷೇಧದ ಅಧಿಕೃತ ಆದೇಶದ ಪ್ರತಿ ಕೋರಬೇಕು. ಆಗ ಎಲ್ಲ ಬಂಡವಾಳ ಹೊರಗೆ ಬೀಳುತ್ತದೆ.

ಬಟ್ಟೆಯ ಚೀಲದಂತೆ ಕಾಣುವ ಬಣ್ಣ ಬಣ್ಣದ ಪೊಲಿಪ್ರಾಪಲಿನ್ ಚೀಲಗಳು ಶೇ.100 ಪ್ಲಾಸ್ಟಿಕ್ನಿಂದಲೇ ಸಿದ್ಧಪಡಿಸಿರುವುಂಥವು ಎಂಬುದನ್ನು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳುತ್ತಿದೆ. ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಬಳಕೆ ನಿಷೇಧ ಮತ್ತು ಪೊಲಿಪ್ರಾಪಲಿನ್ ಚೀಲಗಳ ಬಳಕೆ ಆರಂಭಿಸಿರುವುದು ಪಟ್ಟಭದ್ರ ಹಿತಾಸಕ್ತಿಗಳ ಕುತಂತ್ರ. ಭಕ್ತರು ದೇವಸ್ಥಾನದ ಪ್ರಸಾದದೊಂದಿಗೆ ಒಯ್ಯುವ ಚೀಲ ಬಟ್ಟೆಯಂತೆ ಕಾಣುವ ಪ್ಲಾಸ್ಟಿಕ್. ಪ್ರಯೋಗಾಲಯದ ವರದಿಯ ಹೊರತಾಗಿಯೂ ದೇವಸ್ಥಾನಗಳಲ್ಲಿ ಈಗಲೂ ಪೊಲಿಪ್ರಾಪಲಿನ್ ಚೀಲಗಳನ್ನೇ ಬಳಸಲಾಗುತ್ತಿದೆ. ಇದನ್ನೆ ಈಗ ಸಾರ್ವತ್ರಿಕಗೊಳಿಸಲಾಗುತ್ತಿದೆ.

ಪೊಲಿಪ್ರಾಪಲಿನ್ ಬ್ಯಾಗ್ ಗಳನ್ನು ಸಿದ್ಧಪಡಿಸುವ ಉದ್ಯಮಿಗಳ ಹಿತಾಸಕ್ತಿ ಕಾಪಾಡಲಿಕ್ಕಾಗಿಯೇ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನಿಷೇಧದ ಕುತಂತ್ರ ಹೆಣೆಯಲಾಗಿದೆ.
ದಿನಸಿ ಅಂಗಡಿಯಲ್ಲಿ ಮನೆ ಬಳಕೆಯ 20 ವಸ್ತುಗಳನ್ನು ಖರೀದಿಸಿದರೆ ಅದರಲ್ಲಿ 15ಕ್ಕಿಂತ ಹೆಚ್ಚು ವಸ್ತುಗಳು ಪ್ಲಾಸ್ಟಿಕ್ನಲ್ಲಿ ಪ್ಯಾಕ್ ಆಗಿರುವಂಥವೇ ಆಗಿರುತ್ತವೆ. ಪ್ಲಾಸ್ಟಿಕ್ ಪ್ಯಾಕ್ನ ಇವಿಷ್ಟೂ ವಸ್ತುಗಳು ತುಂಬಿಕೊಂಡು ಹೋಗುವುದು 12 ಗ್ರಾಂ. ಗಿಂತ ಕಡಿಮೆ ತೂಕದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ನಲ್ಲಿ. ಮಂಗಳೂರು ಮಹಾನಗರ ಪಾಲಿಕೆಯ ತ್ಯಾಜ್ಯ ಘಟಕದಲ್ಲಿ 20 ವಸ್ತುಗಳ ಪ್ಲಾಸ್ಟಿಕ್ ಪ್ಯಾಕ್ಗೆ ಜಾಗ ಇದೆ. ಒಂದು ಕ್ಯಾರಿಬ್ಯಾಗ್ಗೆ ಮಾತ್ರ ಇಲ್ಲವೇ?

ಬಿಸ್ಕಿತ್, ಕುರ್ಕುರೆ, ಲೇಸ್ ನಂತಹ ಖಾದ್ಯಗಳ ಪ್ಯಾಕ್ ಗೆ ಮತ್ತು ಖಾದ್ಯ ತೈಲಗಳ ಪ್ಯಾಕಿಂಗ್ಗೆ ಬಳಸುವ, ಹಾಲು, ಚಾಕಲೆಟ್, ಬೀಡಿ, ಗುಟ್ಕಾ, ಆಹಾರ ಸಾಮಗ್ರಿಗಳ ಪೊಟ್ಟಣದ ಪ್ಲಾಸ್ಟಿಕ್ ಮರುಬಳಕೆ ಸಾಧ್ಯವಿಲ್ಲ. ಕ್ಯಾರಿ ಬ್ಯಾಗ್ ಮರುಬಳಕೆ ಸಾಧ್ಯ. ಹಾಗಾದರೆ ನಿಷೇಧಿಸಬೇಕಿರುವುದು ಯಾವುದನ್ನು? ಮಂಗಳೂರು ನಗರ ಒಂದರಲ್ಲಿ ದಿನಕ್ಕೆ 200 ಟನ್ ತ್ಯಾಜ್ಯ ಸಂಗ್ರಹವಾಗುತ್ತದೆ. ಇದರಲ್ಲಿ ಪ್ಲಾಸ್ಟಿಕ್ 12 ಟನ್ ಇರುತ್ತದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ. ಈ 12 ಟನ್ ಪ್ಲಾಸ್ಟಿಕ್ ತ್ಯಾಜ್ಯದಲ್ಲಿ ಕ್ಯಾರಿಬ್ಯಾಗ್ ಗಳ ತೂಕ 600 ಕೆ.ಜಿ. ದಾಟದು. 12 ಟನ್ ಪ್ಲಾಸ್ಟಿಕ್ ಸಹಿಸಿಕೊಳ್ಳುವವರಿಗೆ 600 ಕೆ.ಜಿ. ಹೊರೆಯಾಗುತ್ತಿದೆ. ಕೇವಲ 600 ಕೆ.ಜಿ. ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ವಿಲೇವಾರಿ ಮಾಡಲಾಗದ ಆಡಳಿತಗಾರರ ವೈಫಲ್ಯದ ಶಿಕ್ಷೆಯನ್ನು ಜನಸಾಮಾನ್ಯರು ಮತ್ತು ಉತ್ಪಾದಕರಿಗೆ ವಿಧಿಸಲಾಗುತ್ತಿದೆ. ದೇಶಾದ್ಯಂತ ಪ್ಲಾಸ್ಟಿಕ್ ಮಂಗಳೂರಿಗೆ ಬರಬಹುದು ಆದರೆ ಮಂಗಳೂರಿನಲ್ಲೇ ಸಿದ್ಧವಾಗುವ ಕ್ಯಾರಿಬ್ಯಾಗ್ ಇವರಿಗೆ ಬೇಡ ಇದೆಂಥ ನ್ಯಾಯ?

ಜಿಲ್ಲಾಡಳಿತಕ್ಕೆ ಪ್ಲಾಸ್ಟಿಕ್ ನ ಹಿಂದೆ ಬೀಳುವುದಕ್ಕಿಂತ ಮಹತ್ವದ ಕೆಲಸ ಇನ್ನೊಂದಿಲ್ಲ ಎಂದೆನಿಸುತ್ತದೆ. ಮಲೇರಿಯ, ಡೆಂಗ್ಯೂದಂತಹ ಮಾರಕ ರೋಗಗಳು ಜನಸಮಾನ್ಯರನ್ನು ಕಾಡುತ್ತಿವೆ. ಬೇಸಿಗೆಯಲ್ಲಿ ನೀರಿನ ಹಾಹಾಕಾರ ಏಳುತ್ತದೆ, ಇಂದು ಹಾಕಿದ ಡಾಮರು ರಸ್ತೆಯಿಂದ ನಾಳೆಯೇ ಕಿತ್ತು ಹೋಗುತ್ತಿದೆ. ಪಡಿತರ ಚೀಟಿಯ ಸಮಸ್ಯೆ ನೀಗಿಸಲು ಆಹಾರ ಇಲಾಖೆಯ ಸಿಬ್ಬಂದಿ ಈಗಲೂ ಪರದಾಡುತ್ತಿದ್ದಾರೆ. ಇದಕ್ಕೆಲ್ಲ ಸಿಬ್ಬಂದಿ ಇಲ್ಲ ಎನ್ನುವವರು ಹತ್ತಾರು ಅಧಿಕಾರಿಗಳು, ನೂರಾರು ಸಿಬ್ಬಂದಿಯನ್ನು ಪ್ಲಾಸ್ಟಿಕ್ನ ಹಿಂದೆ ಬಿಟ್ಟಿದ್ದಾರೆ.

ಪ್ಲಾಸ್ಟಿಕ್ ನಿಷೇಧಿಸುವವರು ಬದಲಿ ವ್ಯವಸ್ಥೆಯನ್ನೂ ಮಾಡಬೇಕಿದೆ. ಬದಲಿ ವ್ಯವಸ್ಥೆ ಎಂದರೆ ಪೊಲಿಪ್ರಾಪಲಿನ್ ಬ್ಯಾಗ್ ಎಂದು ತೋರಿಸಿದರೆ, ಪೊಲಿಪ್ರಾಪಲಿನ್ ಕೂಡ ಪ್ಲಾಸ್ಟಿಕ್ ಎಂಬುದು ಪರಿಸರ ಇಲಾಖೆಯೇ ಸ್ಪಷ್ಟಪಡಿಸಿದೆ. ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಮರುಬಳಕೆ ಸಾಧ್ಯ. ಇದನ್ನು ಮಾರುಕಟ್ಟೆಯಲ್ಲಿ 10ರೂ.ಗೆ ಕೆ.ಜಿ.ಯಂತೆ ಖರೀದಿಸುತ್ತಾರೆ. ಪೊಲಿಪ್ರಾಪಲಿನ್ ಆಗಲಿ, ಖಾದ್ಯ ವಸ್ತುಗಳ ರ್ಯಾಪರ್ ಆಗಲಿ ಮರುಬಳಕೆ ಸಾಧ್ಯವಿಲ್ಲ. ಆದುದರಿಂದ ಪರಿಸರಕ್ಕೆ ಮಾರಕ ಯಾವುದು ಮತ್ತು ನಿಷೇಧಿಸಬೇಕಾದ ಪ್ಲಾಸ್ಟಿಕ್ ಯಾವುದು ಎಂಬುದನ್ನು ಆಡಳಿತಗಾರರು ಇನ್ನೊಮ್ಮೆ ಯೋಚಿಸಬೇಕಿದೆ. ಈ ಲೆಕ್ಕಚಾರದಲ್ಲಿ ತೊಡಗಿದರೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನಿಷೇಧ ಒಂದು ಮೂರ್ಖತನದ ನಿರ್ಧಾರ ಎನ್ನೋದು ಖಾತರಿಯಾಗಿಬಿಡುತ್ತದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English