ಜರ್ಮನ್ ಸ್ಫೋಟದ ಶಂಕಿತ ಆರೋಪಿ ಅಬ್ದುಲ್ ಸಮದ್ ಬಿಡುಗಡೆ

9:21 PM, Monday, July 5th, 2010

ಜರ್ಮನ್ ಸ್ಫೋಟದ ಶಂಕಿತ ಆರೋಪಿ ಅಬ್ದುಲ್ ಸಮದ್ ಭಟ್ಕಳ್ ಜಾಮೀನು ಪಡೆದುಕೊಂಡ ಮೂರು ವಾರಗಳ ನಂತರ ಇದೀಗ ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಈತ ಅಕ್ರಮ ಶಸ್ತ್ರಾಸ್ತ್ರ ವಶ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನಕ್ಕೊಳಗಾಗಿದ್ದ
ಸಮದ್ ಉತ್ತರ ಕರ್ನಾಟಕದ ಭಟ್ಕಳ ನಿವಾಸಿ. 2009ರ ಅಕ್ರಮ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿದ್ದ. ಆತನ ವಿರುದ್ಧ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷ್ಯಗಳು ಇಲ್ಲದ ಕಾರಣ ಇಲ್ಲಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜಾಮೀನು ನೀಡಿತ್ತು.
25,000 ರೂಪಾಯಿ ಠೇವಣಿ ಮತ್ತು ಇಬ್ಬರು ಸ್ಥಳೀಯ ವ್ಯಕ್ತಿಗಳ ವೈಯಕ್ತಿಕ ಭದ್ರತೆ ನೀಡಿದ ನಂತರ ಸಮದ್‌ನನ್ನು ಬಿಡುಗಡೆ ಮಾಡಲಾಗಿದೆ.
ಭೂಗತ ಪಾತಕಿ ಛೋಟಾ ಶಕೀಲ್ ಅನುಚರನಾಗಿರುವ ಸಮದ್, ಕಳೆದ ವರ್ಷದ ಆಗಸ್ಟ್ ಐದರಂದು ಮುಂಬೈಯ ಮಜ್ಗಾನ್ ಹೊಟೇಲ್‌ನಲ್ಲಿ ಬಂಧಿತರಾಗಿದ್ದ ಹಾಜಿ ಇಮ್ರಾನ್, ಸುಲೇಮಾನ್ ಪಟೇಲ್ ಮತ್ತು ಅಫ್ಜಲ್ ಶೇಖ್ ಎಂಬ ಮೂವರಿಗೆ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದ ಎಂದು ಎಟಿಎಸ್ ಆರೋಪಿಸಿತ್ತು.
ದುಬೈಯಿಂದ ಸಮದ್ ವಾಪಸ್ ಬರುತ್ತಿರುವ ಕುರಿತು ಮಾಹಿತಿ ಪಡೆದುಕೊಂಡಿದ್ದ ಮಹಾರಾಷ್ಟ್ರ ಉಗ್ರ ನಿಗ್ರಹ ದಳ (ಎಟಿಎಸ್) ಮೇ 25ರಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತನನ್ನು ಬಂಧಿಸಿತ್ತು.
ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ 17 ಮಂದಿಯ ಸಾವಿಗೆ ಕಾರಣವಾಗಿದ್ದ ಪುಣೆಯ ಜರ್ಮನ್ ಬೇಕರಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಸುಳಿವುಗಳು ಲಭಿಸಿವೆ ಎಂದಿದ್ದ ಎಟಿಎಸ್ ಸಮದ್‌ನನ್ನು ಬಂಧಿಸಿತ್ತು.
ದುಬೈಯಿಂದ ವಾಪಸ್ ಬರುತ್ತಿದ್ದವನನ್ನು ತಕ್ಷಣವೇ ಬಂಧಿಸಿದ ಎಟಿಎಸ್, ಇದನ್ನು ಕೇಂದ್ರ ಸರಕಾರಕ್ಕೆ ತಿಳಿಸಿತ್ತು. ಸಮದ್ ಪುಣೆ ಸ್ಫೋಟ ಪ್ರಕರಣದ ಶಂಕಿತ ಭಯೋತ್ಪಾದಕ ಎಂದು ಸರಕಾರವೂ ಈ ಸಂದರ್ಭದಲ್ಲಿ ಹೇಳಿತ್ತು.
ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಕೂಡ ಎಟಿಎಸ್ ಮುನ್ನಡೆ ಸಾಧಿಸಿದ್ದನ್ನು ಹೇಳಿದ್ದರು. ಆದರೆ ನಂತರ ಹೇಳಿಕೆಯಿಂದ ಹಿಂದಕ್ಕೆ ಸರಿದಿದ್ದ ಸಚಿವಾಲಯ, ಪೊಲೀಸರು ಎಲ್ಲಾ ವಾಸ್ತವಾಂಶಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕೆಂದು ಹೇಳಿತ್ತು.

Simillar Posts