ಬೆಂಗಳೂರು : ಸೋಮವಾರ ಬೆಳಿಗ್ಗೆ ಜನಾರ್ದನ ರೆಡ್ಡಿ ಸುದ್ದಿಗೋಷ್ಠಿ ನಡೆಸಿ ತಾವು ರಾಜ್ಯದಲ್ಲಿ ಯಾವುದೇ ಅಕ್ರಮ ಗಣಿಗಾರಿಕೆ ನಡೆಸುತ್ತಿಲ್ಲ. ಕಾನೂನು ಬದ್ದವಾಗಿ ಗಣಿಗಾರಿಕೆ ನಡೆಸುತ್ತಿದ್ದು. ಅಪ್ಪಟ ಅಪರಂಜಿ ಚಿನ್ನವಾಗಿದ್ದೇವೆ ಎಂಬ ಸಚಿವ ಜನಾರ್ದನ ರೆಡ್ಡಿ ಮಾತಿಗೆ, ಪ್ರತ್ಯುತ್ತರ ಎಂಬಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದಾಖಲೆ ಸಹಿತ ರೆಡ್ಡಿ ಸಹೋದರರ ಗಣಿಗಾರಿಕೆ ಜನಾರ್ದನ ರೆಡ್ಡಿ ಯವರದೇ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಅವರು ಸಂಜೆ ಖಾಸಗಿ ಹೊಟೇಲ್‌ವೊಂದರಲ್ಲಿ ಪತ್ರಿಕಾಗೋಷ್ಠಿ ನಡೆಸಿ ರೆಡ್ಡಿ ಸಹೋದರರ ಅಪರಂಜಿ ವ್ಯವಹಾರವನ್ನು ವಿವರಿಸಿದರು.
ರೆಡ್ಡಿಗಳಿಂದ ಯಾವುದೇ ಅಕ್ರಮ ಗಣಿಗಾರಿಕೆ ನಡೆದಿಲ್ಲ, ರೆಡ್ಡಿ ಸಹೋದರರು ನೂರಕ್ಕೆ ನೂರ ಒಂದರಷ್ಟು ಪರಿಶುದ್ಧರು ಅಂತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಟಿಫಿಕೆಟ್ ನೀಡಿದ್ದರು. ನಡೆದಿದ್ದರೆ ಅದಕ್ಕೆ ಸಾಕ್ಷಿ ತೋರಿಸಲಿ ಕ್ರಮ ಕೈಗೊಳ್ಳುತ್ತೇನೆ ಎಂದು ಸವಾಲು ಹಾಕಿದ್ದರು. ಹಾಗಾಗಿ ಅಪ್ಪಟ ಅಪರಂಜಿಗಳ ಸಾಚಾತನವನ್ನು ದಾಖಲೆ ಸಹಿತ ನಿಮ್ಮ ಮುಂದೆ ಇಡುತ್ತಿದ್ದೇನೆ. ಮುಖ್ಯಮಂತ್ರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಅನಂತಪುರಂ ಮೈನಿಂಗ್ ಕಾರ್ಪೋರೇಷನ್ ಅನ್ನು ಜನಾರ್ದನ ರೆಡ್ಡಿ ಹೆಸರಿನಲ್ಲಿ ರಿಜಿಸ್ಟರ್ಡ್ ಮಾಡಲಾಗಿತ್ತು. ಮತ್ತೊಂದು ಬ್ಲಾಕ್ ಗೋಲ್ಡ್ ಮೈನಿಂಗ್ ಹೆಸರಿನಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿ ಭಾಗದಲ್ಲಿ ಗಣಿಗಾರಿಕೆ. ನಂತರ ಬ್ಲಾಕ್ ಗೋಲ್ಡ್ ಜತೆ ಓಎಂಸಿ ವಿಲೀನವಾಗಿತ್ತು. ವಿಲೀನವಾಗಿರುವುದೇ ಅನಂತಪುರಂ ಕಂಪನಿ.
ಅನಂತಪುರಂ ಕಂಪನಿ ರಾಜ್ಯದಲ್ಲಿಯೇ ಅಕ್ರಮ ಗಣಿಗಾರಿಕೆ ಚಟುವಟಿಕೆ ನಡೆಸುತ್ತಿತ್ತು. ಅದಕ್ಕೆ ಮಾಲಿಕರೇ ರೆಡ್ಡಿ. ಹಾಗಾದರೆ ರಾಜ್ಯದಲ್ಲಿ ತಾವು ಯಾವುದೇ ಗಣಿಗಾರಿಕೆ ನಡೆಸುತ್ತಿಲ್ಲ ಎನ್ನುವುದಾದರೆ ಈ ದಾಖಲೆಗೆ ಏನು ಹೇಳುತ್ತಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಇದೆಲ್ಲ ರೆಡ್ಡಿಗಳು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುವ ವಿವರದಲ್ಲಿ ದಾಖಲಾಗಿದೆ. ರೆಡ್ಡಿ ಸಹೋದರರು ಅಕ್ರಮ ಅದಿರು ಸಾಗಾಟಕ್ಕಾಗಿ ನ್ಯಾಯಾಲಯಕ್ಕೂ ಸುಳ್ಳು ಮಾಹಿತಿ ನೀಡಿ, ಪರವಾನಿಗೆ ಪಡೆದುಕೊಂಡು, ಹೊಸದಾಗಿ ಗಣಿಗಾರಿಕೆ ನಡೆಸಿ, ಅದಿರು ಸಾಗಿಸಿರುವುದಾಗಿ ಹೇಳಿದರು.
ರೆಡ್ಡಿಗಳು ದಿಢೀರ್ ಶ್ರೀಮಂತರು ಹೇಗಾದರು?: ತಾವು 2004ರವರೆಗೂ ಗಣಿ ಮಾಲೀಕರಲ್ಲ, ಕಾನೂನು ಬದ್ಧವಾಗಿ ಗಣಿ ವ್ಯವಹಾರ ನಡೆಸುತ್ತೇವೆ ಎನ್ನುವ ರೆಡ್ಡಿ ಸಹೋದರರು ದಿಢೀರ್ ಶ್ರೀಮಂತರು ಹೇಗಾದರು ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, ಈ ಮೊದಲು ರೆಡ್ಡಿ ಸಹೋದರರು ತಮ್ಮ ಬಳಿ ಎರಡು ಲಕ್ಷ ರೂಪಾಯಿಯೂ ಇಲ್ಲ ಎಂದಿದ್ದರು. ಆದರೆ ಕಳೆದ ಬಾರಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ತಮ್ಮ ಆದಾಯ ಒಂದೂವರೆ ಸಾವಿರ ಕೋಟಿ ರೂಪಾಯಿ ಅಂತ ಅಧಿಕೃತವಾಗಿ ಘೋಷಿಸಿದ್ದಾರೆ. ಹಾಗಾದರೆ ಇವರ ಅನಧಿಕೃತ ಆದಾಯ ಎಷ್ಟು? ಈಗ ರೆಡ್ಡಿ ಸಹೋದರರು 50 ಸಾವಿರ ಕೋಟಿ ರೂಪಾಯಿ ಒಡೆಯರಾಗಿದ್ದಾರೆ. ಅಷ್ಟೇ ಅಲ್ಲ 36ಸಾವಿರ ಕೋಟಿ ರೂಪಾಯಿ ಹೂಡಿಕೆ ತೋರಿಸಿದ್ದಾರೆ. ಹಾಗಾದರೆ ಇವರು ಅಕ್ರಮ ಗಣಿಗಾರಿಕೆ ನಡೆಸದೇ ನಾಲ್ಕೈದು ವರ್ಷಗಳಲ್ಲಿ ಇಷ್ಟೊಂದು ಮೊತ್ತದ ಆದಾಯ ಹೇಗೆ ಗಳಿಸಿದರು ಎಂದು ಪ್ರಶ್ನಿಸಿದರು.
ಸ್ವಸ್ತಿಕ್ ಮಹೇಶ್, ಖಾರದಪುಡಿ ಯಾರು?: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಜನಾರ್ದನ ರೆಡ್ಡಿಯವರು ಕಾಂಗ್ರೆಸ್‌ನ ಹಲವು ಮುಖಂಡರ ಹೆಸರನ್ನು ಪ್ರಕಟಿಸಿದ್ದಾರೆ. ಆದರೆ ಬಳ್ಳಾರಿಯಲ್ಲಿಯೇ ಇರುವ ಸ್ವಸ್ತಿಕ್ ಮಹೇಶ್, ಖಾರದಪುಡಿ ನಾಗರಾಜ್ ಬಗ್ಗೆ ರೆಡ್ಡಿಯವರು ಸ್ವಲ್ಪ ಮಾಹಿತಿ ನೀಡಲಿ ಎಂದರು. ಆದರೆ ಅವರಿಬ್ಬರ ಬಗ್ಗೆ ವಿವರಣೆ ನೀಡಲು ನಿರಾಕರಿಸಿದ ಕುಮಾರಸ್ವಾಮಿ, ಅದನ್ನು ಅವರೇ ಬಾಯ್ಬಿಟ್ಟು ಹೇಳಲಿ. ಎಲ್ಲಾ ವಿವರ ಗೊತ್ತಾಗುತ್ತೆ ಎಂದರು.
ಕೋರ್ಟ್ ಆಗಲಿ, ಅಧಿಕಾರಿಗಳ ಆದೇಶಕ್ಕೆ ಕಿಂಚಿತ್ತೂ ಬೆಲೆ ನೀಡದ ರೆಡ್ಡಿ ಸಹೋದರರು ತಮ್ಮನ್ನು ತಾವೇ ಅಪರಂಜಿ ಚಿನ್ನ ಎಂದು ಬೆನ್ನು ತಟ್ಟಿಕೊಳ್ಳುವುದು ಬೇಡ. ಯಾರು ಭೂತ, ಯಾರು ಭಗವಂತ ಎನ್ನುವುದನ್ನು ಜನರೇ ನಿರ್ಧರಿಸಲಿ ಎಂದು ಈ ಸಂದರ್ಭದಲ್ಲಿ ತಿರುಗೇಟು ನೀಡಿದರು.
ಕೃಪೆ : ವೆಬ್ ದುನಿಯಾ