ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪತ್ರಿಕಾ ಭವನದ ಆಶ್ರಯದಲ್ಲಿ ಜುಲೈ 1 ರಂದು ಮಂಗಳೂರಿನ ಪತ್ರಿಕಾಭವನದಲ್ಲಿ ಪತ್ರಕರ್ತರ ದಿನವನ್ನು ಆಚರಿಸಲಾಯಿತು.
ಮಂಗಳೂರಿನ ಆಯುಕ್ತರಾದ ವಿಜಯ ಪ್ರಕಾಶರವರು ದೀಪ ಬೆಳಗಿಸುವುದರ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ನಂತರ ಮಾತನಾಡಿದ ಅವರು ಸಮಾಜದ ಬೇಕುಬೇಡಗಳನ್ನು ಪ್ರತಿಬಿಂಬಿಸುವ ಪರಿಣಾಮಕಾರಿಯಾದ ವ್ಯವಸ್ಥೆಯೇ ಮಾಧ್ಯಮ. ಸಾಮಾನ್ಯರು ಮಾಧ್ಯಮದಲ್ಲಿ ಬರುವ ವಿಷಯ, ಟೀಕೆ ಟಿಪ್ಪಣಿಗಳ ಬಗ್ಗೆ ಗಂಭೀರವಾಗಿ ಯೋಚಿಸಿ, ಪ್ರತಿಕ್ರಿಯಿಸಿದಾಗ ಮಾತ್ರ ಒಂದು ವಿಶೇಷವಾದ ಬದಲಾವಣೆ ತರಲು ಸಾಧ್ಯ, ಪತ್ರಿಕಾ ಕ್ಷೇತ್ರದಲ್ಲಿ ಇರುವಂರಹ ಮೌಲ್ಯ, ಆದರ್ಶವನ್ನು ಎಲ್ಲಾ ಕ್ಷೇತ್ರದಲ್ಲಿಯೂ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕು. ಪತ್ರಿಕಾ ಭವನದ ಮುಂದೆ ಹಾದು ಹೋಗಿರುವ ರಸ್ತೆಯನ್ನು ಪತ್ರಿಕಾ ಭವನದ ರಸ್ತೆ ಎಂದು ಮರು ನಾಮಕರಣ ಮಾಡುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ನಂತರ ಮಾತನಾಡಿದ ಚಲನ ಚಿತ್ರ ನಿರ್ದೇಶಕರಾದ ಸದಾನಂದ ಸುವರ್ಣ ಪತ್ರಿಕೋದ್ಯಮದಲ್ಲಿ ಬದಲಾಗುವ ಹಾಗೆ ಚಿತ್ರೋದ್ಯಮದಲ್ಲೂ ಬದಲಾವಣೆಯಾಗಬೇಕು. ಸಮಾಜದ ಸ್ವಾಸ್ಥ್ಯಕ್ಕೆ, ದೇಶದ ಕಲೆಯನ್ನು ಬೆಳೆಸುವಂತವರು ಚಿತ್ರರಂಗಕ್ಕೆ ಬಂದರೆ ಚಿತ್ರೋದ್ಯಮದಲ್ಲಿ ಬದಲಾವಣೆಯಾಗಲು ಸಾಧ್ಯ. ಪತ್ರಕರ್ತರಿಗೆ ಸಂಬಂಧಪಟ್ಟ ಒಂದು ಚಲನಚಿತ್ರ ಪ್ರದರ್ಶಿಸಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದರು.
ಇದೇ ಸಂದರ್ಭದಲ್ಲಿ ನೂರತ ಗ್ರಂಥಾಲಯದ ಉದ್ಘಾಟನೆಯನ್ನು ನಡೆಸಲಾಯಿತು. ಈ ಗ್ರಂಥಾಲಯಕ್ಕೆ ಮಂಗಳೂರಿನ ಉದಯವಾಣಿ ಪತ್ರಿಕೆಯ ಪ್ರಧಾನ ವರದಿಗಾರರಾದ ವಿ. ಮನೋಹರ ಪ್ರಸಾದ್ ಇವರು 50 ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಪ್ರಥಮ ಪತ್ರಿಕೆ ಮಂಗಳೂರು ಸಮಚಾರ್ ಆಗಿದ್ದು 1943 ಜುಲೈ 1 ರಂದು ಬಿಡುಗಡೆಯಾಗಿದ್ದು ಇದರ ಕೀರ್ತಿ ದಕ್ಷಿಣ ಕನ್ನಡ ಜಿಲ್ಲೆಗೆ ಸಲ್ಲುತ್ತದೆ ಎಂದು ಮನೋಹರ ಪ್ರಸಾದ್ ಸಂತಸ ವ್ಯಕ್ತಪಡಿಸಿದರು.
ಪತ್ರಕರ್ತ ಸಂಘದ ಅಧ್ಯಕ್ಷರಾದ ಹರ್ಷ, ಹೊಸದಿಗಂತ ಪತ್ರಿಕೆಯ ವರದಿಗಾರರಾದ ಗುರುವಪ್ಪ ಬಾಳೆಪುಣಿ ಹಾಗೂ ಆನಂದ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪತ್ರಕರ್ತ ಸಂಘದ ಕಾರ್ಯದರ್ಶಿ ಹರೀಶ್ ರೈ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.