ಮಂಗಳೂರು : ಗ್ರೆಗರಿ ಪತ್ರವೋ ಅವರ 23ನೇ ದಿನದ ಉಪವಾಸ ಸತ್ಯಾಗ್ರಹಕ್ಕೆ ಸಾವಯವ ಕೃಷಿ ಮಿಷನ್ ಅಧ್ಯಕ್ಷರಾದ ಆನಂದ್ ಭಾಗವಹಿಸಿದ್ದು. ಪತ್ರಾವೋ ಅವರೊಂದಿಗೆ ಚರ್ಚೆ ನಡೆಸಿ ಅವರಿಗಾದ ಅನ್ಯಾಯದ ವಿರುದ್ಧ ಸರಕಾರದ ಜೊತೆ ಸಮಾಲೋಚಿಸಿ ನ್ಯಾಯದೊರಕಿಸಿ ಕೊಡುವುದಾಗಿ ಅವರು ಹೇಳಿದರು.
ಕೈಗಾರಿಕೆ ಅಭಿವೃದ್ಧಿಗಾಗಿ ಪತ್ರಾವೋ ಕುಟುಂಬದ ಮನೆಯನ್ನು ನೆಲ ಸಮಮಾಡುವುದು ಸರಿಯಲ್ಲ, ಇವತ್ತು ಪತ್ರಾವೋ ಗೆ ಆದ ಅವಮಾನ ಇಡೀ ರಾಜ್ಯದ ಜನತೆಗೆ ಆದ ಅವಮಾನ ಎಂದು ಆನಂದ್ ಹೇಳಿದರು.
ಗ್ರೆಗರಿ ಪತ್ರವೋ ಅವರ ಉಪವಾಸ ಸತ್ಯಾಗ್ರಹ ಕುರಿತು ಸಾವಯವ ಕೃಷಿ ಮಿಷನ್ ಅಧ್ಯಕ್ಷರಾದ ಆನಂದ್ ಹಾಗೂ 5 ತಾಲೂಕಿನ ಕ್ರಷಿಕರು ಜೊತೆಗೂಡಿ ಪ್ರಭಾರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ ರವರ ಜೊತೆ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿಯಲ್ಲಿ ಇಂದು ಬೆಳಗ್ಗೆ ಚರ್ಚೆ ನಡೆಸಿದರು.
ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಆನಂದ್ ಪ್ರತಿದಿನ ಗ್ರೆಗರಿ ಪತ್ರವೋ ಅವರ ಸಿ.ಡಿ. ನೋಡುವಂತದ್ದು ನೋವಿನ ವಿಷಯವಾಗಿದ್ದು, ಈ ಕೃತ್ಯ ಕೃಷಿಕನಿಗೆ ಆದಂತಹ ಮಾನಸಿಕ ವೇದನೆಯಾಗಿದೆ. ಕೈಗಾರಿಕೆಗೆ ಒಂದು ನೀತಿ ಕೃಷಿಗೆ ಒಂದು ನೀತಿ ಆದರೆ ಅದು ಒಂದು ದೇಶದ ಸಮರ್ಪಕ ನೀತಿಯಾಗದು. ಗ್ರೆಗರಿ ಪತ್ರವೋ ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಕೃಷಿಕನಾಗಿಯೇ ಉಳಿಯುತ್ತೇನೆ ಎನ್ನುವವರಿಗೆ ಸರಕಾರ ಬೆಂಬಲ ನೀಡಬೇಕು. ಕೈಗಾರಿಕಾ ಕ್ಷೇತ್ರವನ್ನು ಕೃಷಿ ವಲಯವನ್ನಾಗಿ ಮಾಡಿರುವ ದಾಖಲೆ ಈ ದೇಶದಲ್ಲೇ ಇಲ್ಲ. 350 ವರ್ಷಗಳಿಂದ ಬಾಳಿದ ಮನೆಯನ್ನು ಕೇವಲ 2 ಗಂಟೆಗಳಲ್ಲಿ ಜೆ.ಸಿ.ಬಿ. ಯಿಂದ ನಾಶಮಾಡಿದ್ದು ಗ್ರೆಗರಿಯವರ ಭಾವನೆಗಳಿಗೆ ನೋವುಂಟುಮಾಡಿದಂತಾಗಿದೆ. ಈ ವಿಚಾರದ ಕುರಿತು ಈಗಾಗಲೇ ಜಿಲ್ಲೆಯ ತಾಲೂಕಿನ ಸಾವಯವ ಕೃಷಿಕರ ಜೊತೆ ಚರ್ಚಿಸಿರುತ್ತೇನೆ ಎಂದು ತಿಳಿಸಿದರು. ಅನ್ನ ಹಾಕುವವನು ಉಪವಾಸ ಕುಳಿತಿರುವುದು ದೇಶದ ದರಿದ್ರ ಸ್ಥಿತಿಯಾಗಿದೆ. ಗ್ರೆಗರಿಯವರಿಗಾದ ಅನ್ಯಾಯದ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ನಡೆಸಿ ಈ ಉಪವಾಸ ಸತ್ಯಾಗ್ರಹಕ್ಕೆ ಅಂತ್ಯ ಹಾಡುವುದಾಗಿ ಹಾಗೂ ಸರಕಾರ ಆತನಿಗೆ ಕೃಷಿ ಭೂಮಿಯನ್ನು ಕೊಡಬೇಕು. ನಾಡಿನ ಕೃಷಿಕರು ಜೊತೆಗೂಡಿ, ಗ್ರೆಗರಿಯವರಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.