ಮಂಗಳೂರು : ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯನ್ನು ಮರು ಪರಿಶೀಲಿಸುವಂತೆ, ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರಿಂದ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಕೇಂದ್ರ ಕಾಂಗ್ರೇಸ್ ನೇತೃತ್ವದ ಸರಕಾರ ಬಡವರನ್ನು ಉದ್ಧಾರ ಮಾಡುವುದಾಗಿ ಹೇಳಿ ಪ್ರತಿಯೊಂದು ವಸ್ತುವಿನ ಬೆಲೆಯನ್ನು ಏರಿಸುತ್ತಾ ಹೋಗುತ್ತಿದೆ. ಬಡವರ ರಕ್ತ ಹೀರುವಂತಹ ಕೆಲಸ ಕೇಂದ್ರ ಸರಕಾರ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಅಧೀಕಾರಕ್ಕೆ ಏರಿದ 1 ವರ್ಷದಲ್ಲಿ ಡಿಸೀಲ್ ಗೆ ಒಂದು ಲೀಟರ್ ನಲ್ಲಿ 7.50 ಪೈಸೆ ಹೆಚ್ಚಿಸಿದ್ದೂ ಅಲ್ಲದೆ ಅಡುಗೆ ಅನಿಲದ ದರವನ್ನು ಹೆಚ್ಚಿಸಿದೆ. ಇದರ ಪರಿಣಾಮ ದೇಶದಲ್ಲಿರುವ ಸಾಮಾನ್ಯ ಜನರ ಮೇಲೆ ಬೀರಿದೆ. ಬಿ.ಜೆ.ಪಿ. ಸರಕಾರ ಜನಸಾಮಾನ್ಯರ ಅಭಿವೃದ್ಧಿಗೆ ಅನೇಕ ಕಾರ್ಯ ಕ್ರಮಗಳನ್ನು ನಡೆಸುತ್ತಿದೆ. ಆದರೆ ಕೇಂದ್ರ ಸರಕಾರ ಇದಕ್ಕೆ ತದ್ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ, ಎಂದು ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಜನತಾ ಪಾಟರ್ಿಯ ಅಧ್ಯಕ್ಷ ಪದ್ಮನಾಭ ಕೊಟ್ಟಾರಿಯವರು ತಿಳಿಸಿದರು.
ಮೇಯರ್ ರಜನಿ ದುಗ್ಗಣ್ಣ ಹಾಗೂ ಜನತಾ ಪಾರ್ಟಿಯ ಇತರ ಮಹಿಳಾ ಸದಸ್ಯರು ಒಲೆಯನ್ನು ಹಚ್ಚುವುದರ ಮೂಲಕ ಪ್ರತಿಭಟಿಸಿದರು. ಯು.ಪಿ.ಎ ವಚನ ಭ್ರಷ್ಠ ಸರಕಾರ, ಇದನ್ನು ಬಿ.ಜೆ.ಪಿ ಖಂಡಿಸುತ್ತದೆ. ಎಂದು ಮೇಯರ್ ರಜನಿ ದುಗ್ಗಣ್ಣ ತಿಳಿಸಿದರು.
ಮಾಜಿ ಶಾಸಕ ಜಯರಾಮ ಶೆಟ್ಟಿ, ಚಂದ್ರಹಾಸ ಉಳ್ಳಾಲ್, ಶರಚ್ಚಂದ್ರ ಶೆಟ್ಟಿ ಹಾಗೂ ಮಹಾನಗರ ಪಾಲಿಕೆಯ ಸದಸ್ಯರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.