ಮಂಗಳೂರು : ಗ್ರೆಗರಿ ಮತ್ತು ಕುಟುಂಬ ಭೂಮಿ ತೆರವುಗೊಳಿಸದೆ ಇರುವುದರಿಂದ ಎಂ.ಆರ್.ಪಿ.ಎಲ್ಗೆ 600 ಕೋಟಿ ರೂ, ನಷ್ಟವಾಗಿದೆ ಎಂದು ಎಂ.ಆರ್.ಪಿ.ಎಲ್ ಅಧಿಕಾರಿಗಳು ಪತ್ರಿಕಾ ಹೇಳಿಕೆ ನೀಡಿರುವ ಬೆನ್ನಲ್ಲೇ ಗ್ರೆಗರಿ ಪತ್ರವೋ ಇಂದು ಸಂಜೆ ನಗರದ ವುಡ್ ಲ್ಯಾಂಡ್ಸ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆ ಬಗ್ಗೆ ವಿವರಣೆ ನೀಡಿದರು.
ತಮಗೆ 600 ಕೋಟಿ ರೂ, ನಷ್ಟವಾಗಿದೆ ಮತ್ತು ವಿಸ್ತರಣಾ ಯೋಜನೆಯನ್ನು ಅದರ ಸಂಪೂರ್ಣತೆಯಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಎಂ.ಆರ್.ಪಿ.ಎಲ್ ಪತ್ರಿಕಾ ಹೇಳಿಕೆ ನೀಡಿ ಸರಕಾರ ಹಾಗೂ ಸಂಬಂಧಿಕರ ಮೇಲೆ ಒತ್ತಡ ತಂತ್ರವನ್ನು ಪ್ರಯೋಗಿಸ ಹೊರಟಿದೆ. ಭ್ರಷ್ಟಾಚಾರ ಮತ್ತು ಹೊಣೆಗೇಡಿತನದಿಂದಾಗಿ ಎಂ.ಆರ್.ಪಿ.ಎಲ್ ಈ ರೀತಿ ನಷ್ಟವಾಗಿದ್ದರೂ ಎಂ.ಆರ್.ಪಿ.ಎಲ್ ನನ್ನ ಮೇಲೆ ಆರೋಪ ಹಾಕಿದೆ ಎಂದು ಗ್ರೆಗರಿ ಹೇಳಿದರು.
ಗ್ರೆಗರಿ ಕುಟುಂಬದ ಒಪ್ಪಿಗೆ ಇಲ್ಲದೆ ರೂ.15,000 ಕೋಟಿ ವಿಸ್ತರಣಾ ಯೋಜನೆಯ ಕೋಟಿಗಟ್ಟಲೆ ಮೌಲ್ಯದ ಎಷ್ಷೋ ಕಾಮಗಾರಿಗಳ ಗುತ್ತಿಗೆಗೆ ಈಗಾಗಲೇ ನೀಡಲಾಗಿದೆ. ಈ ಗುತ್ತಿಗೆ ನೀಡುವಿಕೆ ಹಾಗೂ ಕಾಮಗಾರಿಗಳಲ್ಲಿ ಎಷ್ಟೋ ಅವ್ಯವಹಾರಗಳಾಗಿರುವ ಸಾಧ್ಯತೆಯಿದೆ. ಈ ಅವ್ಯವಹಾರಗಳಲ್ಲಿ ಬಹುಷಃ ಸುಮಾರು 600 ಕೋಟಿಗಳಷ್ಟು ದೋಚಿಕೊಂಡಿರುವ ಸಾಧ್ಯತೆ ಇರಬಹುದು. ಬಹುಷಃ ಇದನ್ನು ಮುಚ್ಚಿಡಲು ನನ್ನಿಂದಾಗಿ ಈ ನಷ್ಟವಾಗಿದೆ ಎಂದು ನನ್ನ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಎಂ.ಆರ್.ಪಿ.ಎಲ್ ಅಧಿಕಾರಿಗಳು ಮಾಡುತ್ತಿದ್ದಾರೆ. ಎಂದು ಗ್ರೆಗರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೃಷಿ ಸಂರಕ್ಷಣಾ ಸಮಿತಿಯ ಹೇಮಾವತಿ ಭಟ್, ಮಧುಕರ್ ಅಮಿನ್ ಉಪಸ್ಥಿತರಿದ್ದರು.