ಮಂಗಳೂರು : ಕೈಗಾರಿಕೀಕರಣಕ್ಕಾಗಿ ಮನೆ ಕಳಕೊಂಡು ಬೀದಿಪಾಲದ ಗ್ರೆಗರಿ ಪತ್ರಾವೋ ಉಪವಾಸ ಸತ್ಯಾಗ್ರಹ ಕೊನೆಗೂ ಇಂದು ಮಧ್ಯಾಹ್ನ ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕೊನೆಗೊಂಡಿತು.
24 ದಿನಗಳ ಕಾಲ ನಗರದ ಜಿಲ್ಲಾಧಿಕಾರಿ ಕಚೇರಿ ಮಂಭಾಗದಲ್ಲಿ ನಡೆದ ಗ್ರೆಗರಿ ಪತ್ರಾವೋ ತನ್ನ ಉಪವಾಸ ಸತ್ಯಾಗ್ರಹವನ್ನು ರಾಜ್ಯದ ಮುಖ್ಯ ಮಂತ್ರಿಯವರ ಮನವಿಯ ಮೇರೆಗೆ ಕೊನೆಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾನಾಡಿದ ಕೇಮಾರು ಸ್ವಾಮಿಗಳು ಹಿಂದೆ ಕೋಮುಗಲಭೆ ಅಧಿಕವಿತ್ತು ಆದರೆ ಈಗ ಬಂಡವಾಳ ಶಾಹಿಗಳ ಗಲಾಟೆ ಹೆಚ್ಚಾಗಿದೆ. ಜನಪ್ರತಿನಿಧಿಗಳು ಅಧಿಕಾರದಾಹದಿಂದ ಪದವಿಯನ್ನು ಮರೆಯುತ್ತಿದ್ದಾರೆ. ನಮ್ಮ ಜಿಲ್ಲೆಯನ್ನು ಜೀವ ಕೊಟ್ಟಾದರೂ ಉಳಿಸಬೇಕಾಗಿದೆ. ಮಾಧ್ಯಮಗಳು ಕೃಷಿಕರ ದ್ವನಿಯಾಗ ಬೇಕು ಎಂದು ಸ್ವಾಮೀಜಿ ಹೇಳಿದರು.
ಮುಖ್ಯಮಂತ್ರಿಯವರು ಈಗಾಗಲೇ ದೂರವಾಣಿಯ ಮೂಲಕ ಮಾತನಾಡಿದ್ದು ನಾನು ರೈತರ ಪರವಾಗಿದ್ದೇನೆ. ನನ್ನ ಸಮಸ್ಯೆಗೆ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದಾರೆ. ಇದೇ ಗುರುವಾರ ಮತ್ತು ಶುಕ್ರವಾರ ಈ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯ ಮಂತ್ರಿಯವರು ಹೇಳಿದ ಹಿನ್ನಲೆಯಲ್ಲಿ ಅವರ ಮಾತಿಗೆ ಬೆಲೆ ಕೊಟ್ಟು ಉಪವಾಸ ಸತ್ಯಾಗ್ರಹವನ್ನು ಇಂದಿಗೆ ಮುಕ್ತಾಯಗೊಳಿಸುತ್ತಿರುವುದಾಗಿ ಗ್ರೆಗರಿ ಪತ್ರಾವೋ ತಿಳಿಸಿದರು.
ಗ್ರೆಗರಿಯವರಿಗಾದ ಅನ್ಯಾಯಕ್ಕೆ ಸೂಕ್ತ ಪರಿಹಾರ ಸಿಗದೆ ಹೋದಲ್ಲಿ ಈ ವರೆಗೆ ಗ್ರೆಗರಿಯವರ ಹೋರಾಟದಲ್ಲಿ ಬೆಂಬಲ ನೀಡಿದ ಸಂಘಟನೆಗಳು ಮತ್ತೊಮ್ಮೆ ಒಂದುಗೂಡಿ ಮುಂದಿನವಾರದಿಂದ ಪುನಃ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸುವುದಾಗಿ ಟಿ.ಆರ್ ಭಟ್ ತಿಳಿಸಿದರು.
ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ಹಾಗೂ ಇನ್ನಿತರ ಬೆಂಬಲಿಗರು ಗ್ರೆಗರಿಯವರಿಗೆ ಎಳನೀರು ಕುಡಿಸುವ ಮೂಲಕ ಉಪವಾಸ ಸತ್ಯಾಗ್ರಹಕ್ಕೆ ಅಂತ್ಯ ಹಾಡಿದರು.